Friday, June 13, 2008

ಬೆಂಗಳೂರಿನ ದರಿದ್ರ ಖಾಸಗಿ ಶಾಲೆಗಳು

ಬೆಂಗಳೂರು ಜೂನ್ ೧೩ : ಇಂದು ಶಿಕ್ಷಣ ಎನ್ನುವುದು ವ್ಯಾಪಾರ ಆಗಿಬಿಟ್ಟಿದೆ ಎಂಬುದಕ್ಕೆ ಬೆಂಗಳೂರಿನಲ್ಲಿರುವ ಕೆಲವು ಖಾಸಗಿ ಶಾಲೆಗಳು ಉದಾಹರಣೆಯಾಗಿವೆ. ಇದು ಕೆಲವು ಪುಂಡು ಪೋಕರಿಗಳ ಜನಸೇವೆ, ಸಾಮಾಜಿಕ ಸೇವೆಯ ಇನ್ನೊಂದು ದರಿದ್ರ ಮುಖವಾಗಿಬಿಟ್ಟಿದೆ.
ಬೆಂಗಳೂರಿನಲ್ಲಿರುವ ಖಾಸಗಿ ಶಾಲೆಗಳು ಒಂದರ ಮೇಲೆ ಇನ್ನೊಂದು ಪೈಪೋಟಿ ನಡೆಸಿ, ತಮ್ಮ ಶಾಲೆ ಉತ್ತಮ ಶಿಕ್ಷಣ ಕೊಡುತ್ತಿದೆ, ಪ್ರತಿಶತ ೧೦೦ ಫಲಿತಾಂಶ ಬಂದಿದೆ ಎಂದು ಫ್ಲೆಕ್ಸ್ ಬ್ಯಾನರ್ ರಾಜಕಾರಣ ಮಾಡುತ್ತಿವೆ. ಆದರೆ ಅವುಗಳ ನಿಜವಾದ ಬಣ್ಣ ಬಯಲಾಗುವುದು ಶಾಲೆಗಳಿಗೆ ದಾಖಲಾತಿ ಪ್ರಾರಂಭವಾದಾಗಲೇ. ಇದರಿಂದ ಹೆಚ್ಚು ತೊಂದರೆ ಅನುಭವಿಸುವವರು ಮಧ್ಯಮವರ್ಗದವರೇ ಹೊರತು, ಅತೀ ಬಡವರಲ್ಲ,ಅತೀ ಶ್ರೀಮಂತರಲ್ಲ. ಸಾಮಾಜಿಕ ಸೇವೆಯ ಸೋಗಿನಲ್ಲಿ ಕೆಲವು ಪುಂಡುಪೋಕರಿಗಳು ಬೀದಿಬೀದಿಯಲ್ಲಿ ಶಾಲೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಡೊನೇಷನ್ ಹೆಸರಿನಲ್ಲಿ ಜನರನ್ನು ಹಗಲುದರೋಡೆ ಮಾಡುತ್ತಿದ್ದಾರೆ.
ಯಾವುದೇ ಶಾಲೆಯ ದಾಖಲಾತಿಗೆ ವಿಚಾರಿಸಿದರೂ, ಉದಾಹರಣೆಗೆ ಪದ್ಮನಾಭನಗರದ ಪ್ರಾರ್ಥನಾ ಶಾಲೆ ಅಥವಾ ಮೌಂಟ್ ಕಾರ್ಮೆಲ್ ಶಾಲೆಯೇ ತೆಗೆದುಕೊಳ್ಳಿ, ಇಲ್ಲಿ ಮಧ್ಯಮವರ್ಗದ ಜನ ತಮ್ಮ ಮಕ್ಕಳ ದಾಖಲಾತಿ ಮಾಡಲು ಸಾಧ್ಯವೇ ಇಲ್ಲ. ಡೊನೇಷನ್ನೇ ೨೦ರಿಂದ ೬೦ ಸಾವಿರದ ತನಕ ಕೀಳುತ್ತಾರೆ, ಅಲ್ಲದೆ ಮತ್ತೆ ತಿಂಗಳ ಫೀಸು, ವ್ಯಾನ್ ಬಾಡಿಗೆ ಎನ್ನುವುದು ಗಗನವನ್ನು ಮುಟ್ಟುತ್ತದೆ. ಅಲ್ಲದೆ ಕೆಲವು ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕಿಯರು ೧೦ನೇ ತರಗತಿ, ಪಿಯುಸಿ ಓದಿದವರಾಗಿರುತ್ತಾರೆ. ಅವರಿಗೆ ನೆಟ್ಟಗೆ ಕನ್ನಡ ಬೋಧನೆ ಮಾಡಲೂ ಬರುವುದಿಲ್ಲ, ಆಂಗ್ಲ ಅಕ್ಷರಗಳನ್ನೂ ತಪ್ಪುತಪ್ಪು ಹೇಳಿಕೊಡುತ್ತಾರೆ. ಅಲ್ಲದೆ ವ್ಯಾಕರಣದ ಗಂಧಗಾಳಿ ಅವರಿಗೆ ಇರುವುದಿಲ್ಲ.
ಅಲ್ಲದೆ ತಮ್ಮ ಎರಡನೇ ಆದಾಯಗಳಿಕೆಯ ಸಾಧನವಾದ ಮನೆಪಾಠವನ್ನು ಕೆಲವು ಶಾಲೆಗಳು ಕಡ್ಡಾಯ ಮಾಡುತ್ತಿವೆ. ಇವರು ಶಾಲೆಗಳಲ್ಲಿ ಬೋಧನೆ ಮಾಡುವುದು ಅಷ್ಟರಲ್ಲೇ ಇದೆ,ಮನೆ ಪಾಠ ಬೇರೆ ಕೇಡು. ಇಂತಹ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟುತ್ತಿವೆ. ಇವುಗಳನ್ನು ತಡೆಯಲು ಸರಕಾರ ಕಠಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ಮನೆಪಾಠವನ್ನು ಕಡ್ಡಾಯ ಮಾಡುವ ಕೆಲವು ದರಿದ್ರ ಶಾಲೆಗಳನ್ನು ರದ್ದು ಮಾಡಬೇಕು. ಮನೆಪಾಠಕ್ಕೆ ಹೋಗುವ ಮಕ್ಕಳಿಗೆ ಮಾತ್ರ ಇಲ್ಲಿ ಉತ್ತಮ ಅಂಕಗಳನ್ನು ಕೊಟ್ಟು ಅವರನ್ನು ತರಗತಿಯಲ್ಲಿ ಮೊದಲನೆಯವರನ್ನಾಗಿ ಮಾಡಿ ತಮ್ಮ ತೀಟೆ ತೀರಿಸಿಕೊಳ್ಳುವ ಅನೇಕ ಸಮಾಜದ್ರೋಹಿ ಶಿಕ್ಷಕಿ, ಶಿಕ್ಷಕರ ವಿರುದ್ಧ ಕ್ರಮತೆಗೆದುಕೊಳ್ಳದಿದ್ದಲ್ಲಿ ಇಂತಹ ನೀತಿಗೆಟ್ಟ ಜನರ ಅಟ್ಟಹಾಸಕ್ಕೆ ಮಧ್ಯಮವರ್ಗದ ಮಕ್ಕಳು ಬಲಿಯಾಗುವುದರಲ್ಲಿ ಸಂಶಯವಿಲ್ಲ.

No comments: