Thursday, April 30, 2009

ಧಿಕ್ಕಾರವಿರಲಿ ಮತದಾನ ಮಾಡದವರಿಗೆ

ಬೆಂಗಳೂರು ಏಪ್ರಿಲ್ ೩೦: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ದೇಶದ ಪ್ರತಿಶತ ೫೦ ರಷ್ಟು ಮತದಾರರು ತಮ್ಮ ಮತ ಚಲಾಯಿಸದೆ ತಮಗೆ ಈ ದೇಶದ ಬಗ್ಗೆ ಇರುವ ಗೌರವವನ್ನು ವಿಶ್ವಕ್ಕೇ ತೋರಿಸಿದ್ದಾರೆ. ಇಂತಹ ಬುದ್ದಿಹೀನ ಮತದಾರರಿಂದಾಗಿಯೇ ನಾವು ಪ್ರತೀಬಾರಿ ಅದಕ್ಷ, ಅನರ್ಹ ಸರಕಾರವನ್ನು ಪಡೆಯುತ್ತಿದ್ದೇವೆ.

ಅಲ್ಲ, ಈ ಜನಗಳಿಗೆ ಸರಕಾರವನ್ನು, ರಾಜಕಾರಣಿಗಳನ್ನು ಟೀಕಿಸುವುದಕ್ಕೆ ಸಮಯ ಬೇಕಾದಷ್ಟಿದೆ. ಅಲ್ಲದೇ ಅದು ತಮ್ಮ ಜನ್ಮ ಸಿದ್ದ ಹಕ್ಕು ಎಂದುಕೊಂಡು ರಾಜಕಾರಣಿಗಳನ್ನು, ಸರಕಾರಗಳನ್ನು ಬಾಯಿಗೆ ಬಂದಂತೆ ಬಯ್ಯುತ್ತಾ ಕಾಲಕಳೆಯುತ್ತಿದ್ದರೂ, ಇಂತಹ ಸರಕಾರಗಳ ಹುಟ್ಟಿಗೆ ತಾವೇ ಪರೋಕ್ಷ ಕಾರಣವೆಂಬ ತಿಳಿವಳಿಕೆ ಇಲ್ಲದಿರುವುದು ಈ ಜನರ ಮುಠ್ಠಾಳತನವನ್ನು ತೋರಿಸುತ್ತದೆ.

ಮತದಾನವೆಂಬುದು ತಮ್ಮ ಹಕ್ಕು. ಒಂದು ಉತ್ತಮ ಸರಕಾರದ ಜನನಕ್ಕೆ ಕಾರಣವಾಗುತ್ತದೆ, ಉತ್ತಮ ರಾಜಕಾರಣಿಗಳ ಆಯ್ಕೆಗೆ ಸಹಕಾರಿಯಾಗುತ್ತದೆ ಎಂಬ ಕನಿಷ್ಟ ಪರಿಜ್ಞಾನವೂ ಅವರಿಗೆ ಇಲ್ಲದಿರುವುದು ಒಂದು ರಾಷ್ಟ್ರೀಯ ದುರಂತವೆನ್ನಬಹುದು. ಬಹುತೇಕ ವಿದ್ಯಾವಂತರೇ ಈ ಗುಂಪಿಗೆ ಸೇರಿರುವುದು ನಾಚಿಕೆಗೇಡು.

"ಈ ಜನರಿಗೆ ಯಾವತ್ತೂ ಬುದ್ದಿ ಬರುವುದಿಲ್ಲ...."....ಅಲ್ಲರೀ ವೋಟು ಯಾರಿಗೆ ಬೇಕಾದರೂ ಹಾಕಿ.... ಅದರೆ ಮತದಾನ ಮಾತ್ರ ಮಾಡದಿರಬೇಡಿ. ನೀವು ಮತದಾನ ಮಾಡದಿರುವುದರಿಂದ ಅಯೋಗ್ಯ ಸರಕಾರಗಳು ಅಧಿಕಾರ ಹಿಡಿಯುತ್ತವೆ. ಅಯೋಗ್ಯ ರಾಜಕಾರಣಿಗಳು ಆಯ್ಕೆ ಆಗುತ್ತಾರೆ. ಅಯೋಗ್ಯ ಪಕ್ಷಗಳು ಚಿಗುರಿಕೊಳ್ಳುತ್ತವೆ. ಅದೂ ಅಲ್ಲದೆ ಸಿಲಿಕಾನ್ ಕಣಿವೆ ಎಂದು ಹೆಸರಾದ ಉದ್ಯಾನನಗರಿಯಲ್ಲಿಯೇ ಕನಿಷ್ಥ ಮತದಾನವಾಗಿರುವುದು ಬಹಳ ಚಿಂತೆಯ ವಿಷಯ. ಧಿಕ್ಕಾರವಿರಲಿ ಈ ವಿದ್ಯಾವಂತ ಬುದ್ದಿಹೀನರಿಗೆ .

No comments: