Friday, January 02, 2009

ಕನ್ನಡ ಜಾಗೃತಿ ವರ್ಷ ಮತ್ತು ಸಪ್ತ ಸೂತ್ರಗಳು

ಬೆಂಗಳೂರು ಜನವರಿ ೦೨: ರಾಜ್ಯದ ಇತಿಹಾಸದಲ್ಲೇ ಮೊದಲಾಗಿ ಡಾ. ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರಕಾರ ಕನ್ನಡದ ಬಗ್ಗೆ ರಾಜ್ಯ ಸರಕಾರದ ಕಾಳಜಿಯನ್ನು ತೋರ್ಪಡಿಸಿದೆ. ಅಂದರೆ ಅಧಿಕೃತವಾಗಿ ಈ ವರ್ಷವನ್ನು "ಕನ್ನಡ ಜಾಗೃತಿ ವರ್ಷ" ವನ್ನಾಗಿ ಘೋಷಿಸಿದೆ.

ಇಂದಿನಿಂದ (ಜನವರಿ ೨) ಅಂಗಡಿ ಮುಂಗಟ್ಟುಗಳ ಯಾವುದೇ ನಾಮಫಲಕಗಳಲ್ಲಿ ಕನ್ನಡ ಕಂಡುಬರದಿದ್ದರೆ ಹತ್ತು ಸಾವಿರ ರೂಪಾಯಿ ದಂಡ ವಿಧಿಸುವ ಕುರಿತು ಸರಕಾರ ಅಧಿಕೃತ ಘೋಷಣೆ ಮಾಡಿದೆ. ಇದು ಕನ್ನಡ ಅನುಷ್ಠಾನದ ಮೊದಲ ಹಂತವಾಗಿದೆ. ಈಗ ಬೆಂಗಳೂರಿನಲ್ಲಿರುವ ಕನ್ನಡ ವಿರೋಧಿಗಳಿಗೆ ಚುರುಕು ಮುಟ್ಟಿಸುವ ಒಂದು ಕ್ರಮವಾಗಿದೆ.
-------------------------------------------------------------------------------------
ಸಪ್ತ ಸೂತ್ರಗಳು :
೧. ನಮ್ಮ ಭಾಷೆ ಕನ್ನಡ, ಆಡಳಿತವು ಕನ್ನಡ.
೨. ನಾವು ಕನ್ನಡಿಗರು, ನಮ್ಮ ಶಿಕ್ಷಣ ಕನ್ನಡವಾಗಿರಲಿ.
೩. ನಮ್ಮ ವ್ಯವಹಾರ ಕನ್ನಡದಲ್ಲಿ, ನಾಮ ಫಲಕವೂ ಕನ್ನಡದಲ್ಲಿರಲಿ.
೪. ಕನ್ನಡ ನುಡಿ ಆಡೋಣ, ಕನ್ನಡ ಗಡಿ ಕಾಯೋಣ.
೫. ನೆಲ ನಮ್ಮದು, ಜಲ ನಮ್ಮದು, ಉದ್ಯೋಗ ಕನ್ನಡಿಗರಿಗೆ.
೬. ನಾವು ಕನ್ನಡಿಗರು, ನಮ್ಮ ಸಂಸ್ಕೃತಿ ಕನ್ನಡ.
೭. ಎಲ್ಲಿಂದಾದರೂ ಬಂದಿರಿ, ಯಾರಾದರೂ ಆಗಿರಿ, ಕನ್ನಡಿಗರಾಗಿರಿ.

-------------------------------------------------------------------------------------

ಇದಲ್ಲದೆ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಕನ್ನಡದಲ್ಲಿ ಶಿಕ್ಷಣಕ್ಕೆ ಕ್ರಮ. ಕನ್ನಡವನ್ನು ಪ್ರಥಮ ವಿಷಯವನ್ನಾಗಿ ಪಡೆದು, ಅದರಲ್ಲಿ ಶೇಕಡಾ ೮೦ಕ್ಕಿಂತ ಅಧಿಕ ಅಂಕ ಪಡೆದವರಿಗೆ ಸರಕಾರೀ ಉದ್ಯೋಗದಲ್ಲಿ ಆದ್ಯತೆ ಮೊದಲಾದ ಕನ್ನಡಕ್ಕೆ ಪೂರಕವಾದ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬೇಕಾಗಿದೆ. ಅಲ್ಲದೆ ಅನ್ಯ ಭಾಷಾ ಪತ್ರಿಕೆಗಳ ಮೇಲೆ ಅಧಿಕ ತೆರಿಗೆ ಹಾಕಿ ಅವುಗಳನ್ನು ನಿರ್ಬಂಧಿಸುವ ಕೆಲಸ ಮೊದಲು ಆಗಬೇಕು. ಏಕೆಂದರೆ ತಮಿಳುನಾಡು, ಆಂಧ್ರಪ್ರದೇಶಕ್ಕೆ ಹೋದರೆ ಅಲ್ಲಿ ನಮ್ಮ ಕನ್ನಡ ಪತ್ರಿಕೆ ಓದಲೂ ಸಿಗುವುದಿಲ್ಲ. ಆದರೆ ಕರ್ನಾಟಕದಲ್ಲಿ ರಾಜಾರೋಷವಾಗಿ ಪತ್ರಿಕೆ ಹಂಚುವ ಕೆಲಸ ಆಗುತ್ತದೆ. ಅಲ್ಲದೆ ಅನ್ಯ ಭಾಷಾ ಚಲನ ಚಿತ್ರಗಳನ್ನೂ ನಿರ್ಬಂಧಿಸುವ ಕೆಲಸ ಆಗಬೇಕು.

ಆದರೆ ಈ ಕೆಲಸ ಒಮ್ಮೆಗೇ ಆಗಲು ಸಾಧ್ಯವಿಲ್ಲ. ಹಂತ ಹಂತವಾಗಿ ಅವುಗಳನ್ನು ನಿರ್ಬಂಧಿಸಬೇಕು.ಇಲ್ಲದಿದ್ದಲ್ಲಿ ಅನ್ಯಭಾಷಿಗರ ಹಾವಳಿಯಿಂದಾಗಿ ನಾವು ನಮ್ಮ ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಕೇವಲ ಆಂಗ್ಲ ಹಾಗೂ ಕನ್ನಡ ಭಾಷೆಗಳಿಗೆ ಆದ್ಯತೆ ನೀಡಿ ಉಳಿದೆಲ್ಲಾ ಭಾಷೆಗಳ ಮಾಧ್ಯಮಗಳನ್ನು ಹಂತ ಹಂತವಾಗಿ ಮಟ್ಟ ಹಾಕುವ ಕೆಲಸ ಆಗಬೇಕು. ಇಲ್ಲದಿದ್ದಲ್ಲಿ ಬೆಂಗಳೂರು ಮತ್ತೊಂದು ಕಾಸರಗೋಡು ಆಗುವುದರಲ್ಲಿ ಸಂಶಯವಿಲ್ಲ.

ಆದ್ದರಿಂದ ರಾಜ್ಯ ಸರಕಾರ ತೆಗೆದುಕೊಂಡಿರುವ ಕ್ರಮಗಳಿಗೆ ಎಲ್ಲರೂ ತಮ್ಮ ಬೆಂಬಲ ನೀಡಿ ಕನ್ನಡವನ್ನು ಉಳಿಸುವತ್ತ್ತ, ಬೆಳೆಸುವತ್ತ ತಮ್ಮ ಕಿರುಕಾಣಿಕೆ ಸಲ್ಲಿಸಬೇಕಾಗಿ ಕಳಕಳಿಯ ಮನವಿ.

1 comment:

ಗುರು [Guru] said...

ದಯವಿಟ್ಟು ಎಲ್ಲಾ ಅಚ್ಚ ಕನ್ನಡಿಗರು ಈ ಸರಕಾರದ ಕ್ರಮಕ್ಕೆ ಬೆಂಬಲ ಸೂಚಿಸಿ, ಕನ್ನಡವನ್ನು ಉಳಿಸುವತ್ತ ಬೆಳೆಸುವತ್ತ ತಮ್ಮ ಸಹಾಯ ಹಸ್ತ ಚಾಚಿ.