Sunday, October 26, 2008

ಪುಕ್ಕಟೆ ಪ್ರಚಾರಪ್ರಿಯರು

ಬೆಂಗಳೂರು ಅಕ್ಟೋಬರ್ ೨೬ : ನೀವು ಇತ್ತೀಚಿನ ಕೆಲವು ಪತ್ರಿಕೆಗಳನ್ನು ತಿರುವಿ ಹಾಕಿದಾಗ ನಿಮ್ಮ ಕಣ್ಣಿಗೆ "ಪ್ರಶಸ್ತಿ ಪ್ರದಾನ ಸಮಾರಂಭ" ಎಂಬ ಅಂಕಣ ಕಣ್ಣಿಗೆ ಬಿದ್ದಿರಬಹುದು. ನೀವು ಸೂಕ್ಷ್ಮವಾಗಿ ಪ್ರತೀ ದಿನ ಪತ್ರಿಕೆ ಓದುವವರಾಗಿದ್ದರೆ ಪ್ರಶಸ್ತಿ ಪಡೆದವರೇ ಮತ್ತೆ ಮತ್ತೆ ಪ್ರಶಸ್ತಿ ಪಡೆಯುತ್ತಿರುವುದು ನಿಮ್ಮ ಗಮನಕ್ಕೆ ಬರಬಹುದು. ನಿಮಗೆ ಗೊತ್ತೇ?...ಈ ಪ್ರಶಸ್ತಿ ಪ್ರದಾನ ಸಮಾರಂಭಗಳು ನಿಜವಾಗಿ ಪ್ರಶಸ್ತಿ ಪಡೆಯುವವರೇ ಕೆಲ ಖಾಸಗಿ ಸಂಸ್ಥೆಗಳಿಗೆ ಹಣ ಕೊಟ್ಟು ಆಯೋಜಿತವಾದವೆಂದು?.
ಕೆಲವರಿಗೆ ಪ್ರಶಸ್ತಿಯ ಹಸಿವು ಎಷ್ಟಿರುತ್ತದೆಯೆಂದರೆ ಪುಟಗೋಸಿ ಬೆಲೆಯ (ಅಂದರೆ ಒಣಗಿದ ಹಣ್ಣುಗಳು, ಹಳೇ ಹಾರ) ಪ್ರಶಸ್ತಿ ಪಡೆಯಲು ಹತ್ತುಸಾವಿರದವರೆಗೆ ತಮ್ಮ ಕೈಯಿಂದಲೇ ಖರ್ಚು ಮಾಡಿ ಎಲ್ಲರ ಸಮ್ಮುಖದಲ್ಲಿ ಬೀಗುವುದು ಇಲ್ಲಿ ಸಾಮಾನ್ಯವಾಗಿದೆ. ಅದೂ ಕೆಲವು ಖಾಸಗಿ ಸಂಸ್ಥೆಗಳು ಈ ಸಮಾರಂಭಕ್ಕೆ ಚಿತ್ರನಟ ಹಾಗೂ ನಟಿಯರು, ಬುದ್ದಿ (ಇಲ್ಲದ) ಜೀವಿಗಳನ್ನು ಕರೆಸಿ ಅವರಿಗೂ ಒಣಹಾರ ಹಾಕಿ ಒಂಥರಾ ಪುಕ್ಕಟೆ ಪ್ರಚಾರ ಪಡೆಯುದನ್ನು ಆಗಾಗ ಮಾಡುತ್ತಿರುತ್ತವೆ.
ಪ್ರಶಸ್ತಿ ಪ್ರದಾನ ವಿಧಾನ
ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಪ್ರಶಸ್ತಿ ಪಡೆಯಬಹುದು.ಸಮಾಜದಲ್ಲಿ ಉತ್ತಮ ಹೆಸರು ಹೊಂದಿರಲೇಬೇಕೆಂಬ ನಿಯಮವಿಲ್ಲ. ಒಂದು ಪ್ರಶಸ್ತಿಗೆ ಕನಿಷ್ಠ ೨೫ ಸಾವಿರ ರೂಪಾಯಿ ನೀಡಬೇಕು. ಅದರಲ್ಲಿ ಕೇವಲ ೫ ಸಾವಿರ ರೂಪಾಯಿ ನಿಮ್ಮ ಪ್ರಶಸ್ತಿಗೆ ಬಳಕೆಯಾಗುತ್ತದೆ. ಮಿಕ್ಕ ಹಣ ಸಂಸ್ಥೆಗೆ ಸೇರುತ್ತದೆ.ಹೆಚ್ಚು ಲಾಭ ಬೇಕೆಂದರೆ ಹೆಚ್ಚು ಹೆಚ್ಚು ಜನರಿಗೆ ಪ್ರಶಸ್ತಿ ನೀಡುವುದು ಅನಿವಾರ್ಯ.

ಈ ಪ್ರಶಸ್ತಿ ಪ್ರದಾನ ಸಮಾರಂಭಗಳು ಸಾಮಾಜಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ನಿಜವಾದ ಸಾಧನೆಗೈದವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಸಂಪ್ರದಾಯ ಮರೆಯಾಗಿ, ಏನೂ ಸಾಧನೆಮಾಡದಿದ್ದವರೂ ತಮ್ಮ ಹಣಬಲದಿಂದ ಎಂತಹಾ ದೊಡ್ಡ ಪ್ರಶಸ್ತಿಯನ್ನು ಪಡೆಯುವುದೂ ಈಗಿನ ಕಾಲದಲ್ಲಿ ಸಾಧ್ಯ. ಈ ಖಾಸಗಿ ಆಯೋಜಕರು ಕೆಲವೊಮ್ಮೆ ನೇರವಾಗಿ ಸಾಧಕರಿಗೆ ಕರೆಮಾಡಿ ನಿಮಗೆ ಪ್ರಶಸ್ತಿ ಬಂದಿದೆ, ನೀವು ಇಂತಿಷ್ಟು ಹಣ ನೀಡಬೇಕೆಂದು ನೇರವಾಗಿ ಕೇಳುತ್ತಾರೆ. ನೀವು ಒಪ್ಪಿದರೆ ನಿಮಗೆ ಪ್ರಶಸ್ತಿ ಗ್ಯಾರಂಟಿ. ಈಗ ಸಿಗುವ ಕೇಂದ್ರ ಸರಕಾರದ "ಭಾರತ ರತ್ನ", ಪದ್ಮಶ್ರೀ ಮೊದಲಾದ ಪ್ರಶಸ್ತಿಗಳನ್ನೂ ಸಂಶಯದಿಂದ ನೋಡುವಂತಾಗಿದೆ.
ಫ್ಲೆಕ್ಸ್ ಸಂಸ್ಕೃತಿ
ಇನ್ನೂ ಕೆಲವರು ಸಾಧನೆ ಮಾಡದಿದ್ದರೂ ಸಮಾಜದಲ್ಲಿ ಹೆಸರು ಪಡೆಯಬೇಕೆಂಬ ಹುಚ್ಚು ಆಸೆಯಿಂದ ಫ್ಲೆಕ್ಸ್ ಬ್ಯಾನರ್‌ಗಳನ್ನು ಗಲ್ಲಿ ಗಲ್ಲಿಯಲ್ಲಿ ಹಾಕಿ ಅದರಲ್ಲಿ ತಮ್ಮ ಫೋಟೋ ಬರುವಂತೆ ನೋಡಿಕೊಳ್ಳುತ್ತಾರೆ. ಇದು ಸಾಮನ್ಯವಾಗಿ "ಹುಟ್ಟು ಹಬ್ಬದ ಶುಭಾಶಯ", "ಅಣ್ಣಮ್ಮ ದೇವಿಯ ಉತ್ಸವ", ಕನ್ನಡ ರಾಜ್ಯೋತ್ಸವ, "ಗಣೇಶೋತ್ಸವ" ದ ಬ್ಯಾನರ್‌ಗಳಲ್ಲಿ ಸಾಮಾನ್ಯವಾಗಿದೆ. ಹುಟ್ಟಾ ಲಫಂಗರು, ಬೀದಿ ರೌಡಿಗಳು, ಸಮಾಜ ಘಾತುಕರು ಈ ಫ್ಲೆಕ್ಸ್ ಬ್ಯಾನರ್‌ಗಳಲ್ಲಿ ರಾರಾಜಿಸುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಈ ತರಹ ಅತೀ ಕಡಿಮೆ ಖರ್ಚಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುವುದು ಕೆಲವು ಸಮಾಜಘಾತುಕ ಶಕ್ತಿಗಳ ಒಂದು ತಂತ್ರವಾಗಿದೆ.

ರಾಜ್ಯದ ರಾಜಧಾನಿಯಲ್ಲಿ ಈ ಥರ ಹಣ ಮಾಡುವ ಸಂಸ್ಥೆಗಳು ತುಂಬಾ ಹುಟ್ಟಿಕೊಂಡಿವೆ. ಆದರೆ ಇದರ ನಿಯಂತ್ರಣಕ್ಕೆ ಸರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ, ಏಕೆಂದರೆ ಈ ಸಂಸ್ಥೆಗಳ ವಿರುದ್ದ ಒಂದೇ ಒಂದು ದೂರು ದಾಖಲಾಗದಿರುವುದು ಸರಕಾರಕ್ಕೆ ಮತ್ತೊಂದು ಹಿನ್ನಡೆ. ಆದ್ದರಿಂದ ನೀವು ಮುಂದೆ ವೃತ್ತಪತ್ರಿಕೆ ಓದುವಾಗ ಈ ಥರಹದ ಕೆಲವು ಸುದ್ದಿಗಳನ್ನು ಓದೀರಾ, ಓದಿ ನಕ್ಕೀರ ಜೋಕೆ....ನಾಳೆ ನಿಮಗೂ ಕರೆ ಬರಬಹುದು..."ಸಾರ್ ನಿಮ್ಮ ಸಾಧನೆಯನ್ನು ಪರಿಗಣಿಸಿ, ನಿಮಗೆ ಪ್ರಶಸ್ತಿ ಕೊಡಬೇಕೆಂದಿದ್ದೇವೆ...." ಎಂದು. ಜಾಗ್ರತೆ....

1 comment:

Anonymous said...

ಬೆಂಗಳೂರಿನಲ್ಲಿ ಕೆಲವು ಸಂಸ್ಥೆಗಳು ಇದರಿಂದಾಗಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಭಾರತ ರತ್ನಕ್ಕೆ ಎಷ್ಟಿರಬಹುದು ಯೋಚನೆ ಮಾಡಿ...ಸಭ್ಯರಿಗೆ, ನಿಜವಾದ ಸಾಧಕರಿಗೆ ಪ್ರಶಸ್ತಿ ಕನಸಿನ ಮಾತು. ಅದರಲ್ಲೂ ಮೀಸಲಾತಿ ಹೊಕ್ಕಿದೆ. ದಲಿತರಿಗೆ, ಅಲ್ಪಸಂಖ್ಯಾತರಿಗೆ ಇಷ್ಟು....ಮತಾಂತರಿಗಳಿಗೆ, ಸೋನಿಯಾ ಆಪ್ತರಿಗೆ, ಹಿಂದೂ ವಿರೋಧಿಗಳಿಗೆ ಕೆಲವು ಪ್ರಶಸ್ತಿಗಳನ್ನು ಕಾಯ್ದಿರಿಸಲಾಗಿದೆ.