Thursday, April 30, 2009

ಧಿಕ್ಕಾರವಿರಲಿ ಮತದಾನ ಮಾಡದವರಿಗೆ

ಬೆಂಗಳೂರು ಏಪ್ರಿಲ್ ೩೦: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ದೇಶದ ಪ್ರತಿಶತ ೫೦ ರಷ್ಟು ಮತದಾರರು ತಮ್ಮ ಮತ ಚಲಾಯಿಸದೆ ತಮಗೆ ಈ ದೇಶದ ಬಗ್ಗೆ ಇರುವ ಗೌರವವನ್ನು ವಿಶ್ವಕ್ಕೇ ತೋರಿಸಿದ್ದಾರೆ. ಇಂತಹ ಬುದ್ದಿಹೀನ ಮತದಾರರಿಂದಾಗಿಯೇ ನಾವು ಪ್ರತೀಬಾರಿ ಅದಕ್ಷ, ಅನರ್ಹ ಸರಕಾರವನ್ನು ಪಡೆಯುತ್ತಿದ್ದೇವೆ.

ಅಲ್ಲ, ಈ ಜನಗಳಿಗೆ ಸರಕಾರವನ್ನು, ರಾಜಕಾರಣಿಗಳನ್ನು ಟೀಕಿಸುವುದಕ್ಕೆ ಸಮಯ ಬೇಕಾದಷ್ಟಿದೆ. ಅಲ್ಲದೇ ಅದು ತಮ್ಮ ಜನ್ಮ ಸಿದ್ದ ಹಕ್ಕು ಎಂದುಕೊಂಡು ರಾಜಕಾರಣಿಗಳನ್ನು, ಸರಕಾರಗಳನ್ನು ಬಾಯಿಗೆ ಬಂದಂತೆ ಬಯ್ಯುತ್ತಾ ಕಾಲಕಳೆಯುತ್ತಿದ್ದರೂ, ಇಂತಹ ಸರಕಾರಗಳ ಹುಟ್ಟಿಗೆ ತಾವೇ ಪರೋಕ್ಷ ಕಾರಣವೆಂಬ ತಿಳಿವಳಿಕೆ ಇಲ್ಲದಿರುವುದು ಈ ಜನರ ಮುಠ್ಠಾಳತನವನ್ನು ತೋರಿಸುತ್ತದೆ.

ಮತದಾನವೆಂಬುದು ತಮ್ಮ ಹಕ್ಕು. ಒಂದು ಉತ್ತಮ ಸರಕಾರದ ಜನನಕ್ಕೆ ಕಾರಣವಾಗುತ್ತದೆ, ಉತ್ತಮ ರಾಜಕಾರಣಿಗಳ ಆಯ್ಕೆಗೆ ಸಹಕಾರಿಯಾಗುತ್ತದೆ ಎಂಬ ಕನಿಷ್ಟ ಪರಿಜ್ಞಾನವೂ ಅವರಿಗೆ ಇಲ್ಲದಿರುವುದು ಒಂದು ರಾಷ್ಟ್ರೀಯ ದುರಂತವೆನ್ನಬಹುದು. ಬಹುತೇಕ ವಿದ್ಯಾವಂತರೇ ಈ ಗುಂಪಿಗೆ ಸೇರಿರುವುದು ನಾಚಿಕೆಗೇಡು.

"ಈ ಜನರಿಗೆ ಯಾವತ್ತೂ ಬುದ್ದಿ ಬರುವುದಿಲ್ಲ...."....ಅಲ್ಲರೀ ವೋಟು ಯಾರಿಗೆ ಬೇಕಾದರೂ ಹಾಕಿ.... ಅದರೆ ಮತದಾನ ಮಾತ್ರ ಮಾಡದಿರಬೇಡಿ. ನೀವು ಮತದಾನ ಮಾಡದಿರುವುದರಿಂದ ಅಯೋಗ್ಯ ಸರಕಾರಗಳು ಅಧಿಕಾರ ಹಿಡಿಯುತ್ತವೆ. ಅಯೋಗ್ಯ ರಾಜಕಾರಣಿಗಳು ಆಯ್ಕೆ ಆಗುತ್ತಾರೆ. ಅಯೋಗ್ಯ ಪಕ್ಷಗಳು ಚಿಗುರಿಕೊಳ್ಳುತ್ತವೆ. ಅದೂ ಅಲ್ಲದೆ ಸಿಲಿಕಾನ್ ಕಣಿವೆ ಎಂದು ಹೆಸರಾದ ಉದ್ಯಾನನಗರಿಯಲ್ಲಿಯೇ ಕನಿಷ್ಥ ಮತದಾನವಾಗಿರುವುದು ಬಹಳ ಚಿಂತೆಯ ವಿಷಯ. ಧಿಕ್ಕಾರವಿರಲಿ ಈ ವಿದ್ಯಾವಂತ ಬುದ್ದಿಹೀನರಿಗೆ .

Saturday, April 18, 2009

ನನ್ನ ಮತ ಮಾರಾಟಕ್ಕೆ ಇದೆ....!!!!

ಬೆಂಗಳೂರು ಎಪ್ರಿಲ್ ೧೮: ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ಎಲ್ಲರಿಗೂ ಎನೋ ಒಂಥರಾ ಮಜಾ. ಕೆಲ ಜನರಿಗೆ ಹೆಂಡ, ಸಾರಾಯಿ, ಹಣ ಮುಂತಾದವುಗಳನ್ನು ತೆಗೆದುಕೊಂಡು ಖುಷಿ ಪಡುವ ದಿನ. ಪ್ರತೀ ವರ್ಷ ಈ ಥರಾ ಚುನಾವಣೆಗಳು ಬರಬಾರದೇ ಎಂಬ ಆಸೆ. ಅದೇ ಥರಾ ನನಗೂ ಒಂದು ಆಸೆ ಇದೆ ಮರಾಯ್ರೆ!!!!

ಅಂದರೆ ನನ್ನ ಅಮೂಲ್ಯವಾದ ಮತವನ್ನು ಮಾರಿಕೊಳ್ಳುವುದು. ಇವರಿಗೆ ಮತ ಹಾಕಿ ಐದು ವರ್ಷದಲ್ಲಿ ಕಿತ್ತು ಗಡ್ಡೆ ಹಾಕಿರುವುದು ಅಷ್ಟರಲ್ಲೇ ಇದೆ. ಸ್ವಲ್ಪ ದುಡ್ಡಾದರೂ ಅವರಿಂದ ಕಿತ್ತುಕೊಂಡರೆ ಹಾಕಿದ ಮತಕ್ಕಾದರೂ ಕವಡೆ ಕಿಮ್ಮತ್ತಿನ ಬೆಲೆ ಬರಬಹುದೇನೋ ಎಂಬ ಆಸೆ. ಅಂದರೆ ನನ್ನ ಕಂಡೀಷನ್ನು ಏನು ಇಲ್ಲ. ಯಾರು ಎಷ್ಟು ಹೆಚ್ಚು ಹಣ ಕೊಡುತ್ತಾರೋ ಅವರಿಗೇ ನನ್ನ ಮತ. ಏಕೆಂದರೆ ಇದುವರೆಗೆ ಆಳಿ ಹೋದ ಅಳಿದು ಹೋದ ಜನನಾಯಕರಿಂದ ನನಗಂತೂ ಪುಟಗೋಸಿಯ ಉಪಕಾರ ಆಗಿಲ್ಲ. ಉಪಕಾರಕ್ಕಿಂತ ಉಪದ್ರವೇ ಹೆಚ್ಚು ಎನ್ನಬಹುದು. ಈಗ ಕರ್ನಾಟಕದಲ್ಲಿರುವ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಬ್ಬನೇ ಒಬ್ಬ ಅಭ್ಯರ್ಥಿ ಕರ್ನಾಟಕದ ಜನರ ಕೂಗಿಗೆ ಸ್ಪಂದಿಸಬಲ್ಲಂತಹ ಅರ್ಹತೆ ಹೊಂದಿಲ್ಲ. ಕೇವಲ ದುಡ್ಡು ಮಾಡಿಕೊಳ್ಳುವುದು ಹೇಗೆ, ಜನರ ತಲೆ ಹೊಡೆಯುವುದು ಹೇಗೆ ಎಂಬ ಚಿಂತೆಯಲ್ಲೇ ಮುಳುಗಿರುವ ಈ ನಾಲಯಕ್ ಮಂದಿಗೆ ಓಟು ಕೊಟ್ಟರೆಷ್ಟು ಬಿಟ್ಟರೆಷ್ಟು?. ಆದ್ದರಿಂದ ನಾನು ನನ್ನ ಮತವನ್ನು ಬಹಿರಂಗವಾಗಿ ಹರಾಜಿಗೆ ಇಟ್ಟಿದ್ದೇನೆ. ಯಾರಾದರೂ ಹೆಚ್ಚಿನ ಹಣ ಕೊಟ್ಟಲ್ಲಿ, ಅವ ಎಂಥಹಾ ಕ್ರಿಮಿನಲ್ ಆಗಿರಲಿ, ಕೊಲೆಗಾರ ಆಗಿರಲಿ, ರೇಪಿಸ್ಟ್ ಆಗಿರಲಿ ಅವನಿಗೇ ನನ್ನ ಮತ. ಏಕೆಂದರೆ ಒಮ್ಮೆ ಮತ ಕೊಟ್ಟಮೇಲೆ ಅವ ಮತ್ತೆ ಮುಖ ತೋರಿಸುವುದು ಮುಂದಿನ ಚುನಾವಣೆಯಲ್ಲಿ ಮಾತ್ರ. ಅಲ್ಲದೆ ಕ್ಷೇತ್ರದ ಸಮಸ್ಯೆ, ಜನರ ಸಮಸ್ಯೆ, ರಾಜ್ಯದ ಸಮಸ್ಯೆ ಇವರಿಗೆ ಕಿತ್ತು ಹೋದ ಚಪ್ಪಲಿಗೆ ಸಮ.

ಈ ಮೂಲಕ ನಾನು ಎಲ್ಲ ರಾಜಕೀಯ ಪಕ್ಷಗಳಿಗೆ ಮುಕ್ತವಾದ ಒಂದು ಆಹ್ವಾನ ನೀಡುತ್ತಿದ್ದೇನೆ. ಈ ಬಹಿರಂಗ ಹರಾಜಿನಲ್ಲಿ ಯಾರು ಅತೀ ಹೆಚ್ಚಿನ ಮೊತ್ತ ದಾಖಲಿಸುತ್ತಾರೋ ಅವರಿಗೇ ನನ್ನ ಮತ. ಕೂಡಲೇ ಇದರಲ್ಲಿ ಭಾಗವಹಿಸುವ ರಾಜಕೀಯ ಪಕ್ಷಗಳು ಕೂಡಲೇ ನನ್ನನ್ನು ಸಂಪರ್ಕಿಸಬೇಕಾಗಿ ವಿನಂತಿ. ಹರಾಜು ಪ್ರಾರಂಭವಾಗುವ ಮೊತ್ತ ರೂ.೫೦೦೦/-. ಇದಕ್ಕಿಂತ ಜಾಸ್ತಿ ಕೂಗಿ ನಿಮ್ಮ ಪಕ್ಷಕ್ಕೆ ನನ್ನ ಮತ ಬೀಳುವ ಹಾಗೆ ನೋಡಿಕೊಳ್ಳಿ.

ಎಚ್ಚರಿಕೆ:ನನ್ನ ಒಂದು ಮತ ನಿಮ್ಮ ಭವಿಷ್ಯ ನಿರ್ಧರಿಸಬಹುದು.