Sunday, February 22, 2009

ಬೆಂಗಳೂರಿನಲ್ಲಿ ಹಗಲು ದರೋಡೆಕೋರರ ಹೆಚ್ಚಳ

ಬೆಂಗಳೂರಿನಲ್ಲಿ ಈಗ ದ್ವಿಚಕ್ರ ಸವಾರರು ಹಾಗೂ ಲಗ್ಗೇಜ್ ತುಂಬಿದ ಆಟೊ, ಲಾರಿಗಳು ಓಡಾಡುವುದು ತ್ರಾಸದಾಯಕವಾಗಿದೆ. ಏಕೆಂದರೆ ಬೆಂಗಳೂರಿನ ರಸ್ತೆಗಳಲ್ಲಿ ಮೈಲಿಗೋದರಂತೆ ಅಡ್ಡಗಟ್ಟುವ ಸರಕಾರೀ ದರೋಡೆಕೋರರು (ಕಳ್ಳ ಕಾಕರು) ಜಾಸ್ತಿಯಾಗಿದ್ದಾರೆ.

ಅಂದರೆ ಎಲ್ಲಿಯಾದರೂ ಸ್ವಲ್ಪ ಸಂದೇಹದಿಂದ ಗಾಡಿ ಓಡಿಸಿದಿರೋ...ನಿಮ್ಮ ದ್ವಿಚಕ್ರ ವಾಹನವನ್ನು ಆಡ್ಡ ಹಾಕಿ ಯಾವುದೇ ದಾಖಲೆಗಳಿದ್ದರೂ ಸಹ ಯಾವುದೋ ಕುಂಟುನೆಪ ತೆಗೆದು ಜೇಬಿನಲ್ಲಿರುವುದನ್ನೆಲ್ಲಾ ದೋಚುವ ಈ ಮಂದಿಯ ಬಗ್ಗೆ ಎಲ್ಲರೂ ಜಾಗರೂಕರಾಗಿರುವುದು ಒಳಿತು. ಹಾಗಂತ ಇವರ ಕೈಯಿಂದ ಪಾರಾಗಲು ಸಾಧ್ಯವೇ ಇಲ್ಲ. ಏಕೆಂದರೆ ರಕ್ತ ಹೀರುವ ಜಿಗಣೆಗಳಂತೆ ಹಣದ ರುಚಿ ಹತ್ತಿರುವ ಈ ಖದೀಮರು ದಿನಕ್ಕೆ ಏನಿಲ್ಲವೆಂದರೂ ಐದು ಸಾವಿರದವರೆಗೂ ದೋಚುತ್ತಿದ್ದಾರೆ. ಹಾಗಂತ ಇವರ ಗುಂಪಿನಲ್ಲಿ ಸಾಚಾಗಳು ತುಂಬಾ ಕಡಿಮೆ. ಬೆಂಗಳೂರಿನ ಗಬ್ಬು ರಸ್ತೆಗಳು, ಹದಗೆಟ್ಟ ಟ್ರಾಫಿಕ್ ವ್ಯವಸ್ಥೆಯನ್ನು ಮೊದಲು ಸರಿ ಮಾಡಿ ನಂತರ ಈ ಕೆಲಸ ಮಾಡುವುದೊಳಿತು. ಎಕೆಂದರೆ Signal ಕೇರ್ ಮಾಡದೆ ಗಾಡಿ ಓಡಿಸುವವರು, wheeling ಮಾಡುವವರು, ಭರೋ....ಎಂದು ಜೋರಾಗಿ ಗಾಡಿ ಓಡಿಸುವ ಕೆಲ ಕಾಲೇಜು ವಿದ್ಯಾರ್ಥಿಗಳು...ಮೊದಲು ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅದು ಬಿಟ್ಟು ಎಲ್ಲರನ್ನೂ ರಕ್ತ ಹೀರಿದಂತೆ ಹಣಕ್ಕಾಗಿ ಪೀಡಿಸುವುದು ಯಾವ ನ್ಯಾಯ?. ಮಾಡಿದರೆ ಎಲ್ಲವೂ ಸರಿ ಇರಬೇಕು.

ಇದರ ಬಗೆ ಕ್ರಮ ತೆಗೆದುಕೊಳ್ಳುವವರು ಯಾರು?.

Friday, February 13, 2009

’ವ್ಯಾ’ಲೆಂಟೈನ್ಸ್ ಡೇ ಪ್ರತಿಭಟನೆ ಹಿಂದೆ ರಾಜಕೀಯ ಪಿತೂರಿ

ನಾಳೆ ಅಂದರೆ ಫೆಬ್ರವರಿ ಹದಿನಾಲ್ಕನೇ ತಾರೀಖು ಎಲ್ಲರೂ ಕಾತರದಿಂದ ನೋಡುತ್ತಿರುವ "ವ್ಯಾಕ್" ಲಾಂಟೈನ್ ಡೇ ಬಂದೇ ಬಿಟ್ಟಿದೆ. ಆದರೆ ಕೆಲ ರಾಜಕೀಯ ಪಕ್ಷಗಳು ಹಾಗೂ ಕೆಲ ಕೋಮುವಾದಿ (ಪ್ರಗತಿಪರ ಸಂಘಟನೆಗಳೆಂದು ಹಣೆಪಟ್ಟಿ ಕಟ್ಟಿಕೊಂಡಿರುವ) ಸಂಘಟನೆಗಳು ಇದರ ಪರವಾಗಿ ಭಾರೀ ಬೆಂಬಲ ನೀಡುವ ಪ್ರತಿಭಟನೆಯನ್ನು :) ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.

ಕಾಂಗ್ರೆಸ್ ಮತ್ತು ರಾಜಕೀಯ ಪಿತೂರಿ

ಇಲ್ಲಿ ನಾವು ಪ್ರಮುಖವಾಗಿ, ಪಾರದರ್ಶಕವಾಗಿ ನೋಡಬೇಕಾದ ಒಂದು ಅಂಶವೆಂದರೆ, ಕೆಲ ರಾಜಕೀಯ ಪಕ್ಷಗಳು, ಪ್ರಮುಖವಾಗಿ ಕಾಂಗ್ರೆಸ್ ಕೇವಲ ಬಿ.ಜೆ.ಪಿ.ಯನ್ನು ಅಧಿಕಾರದಿಂದ ಕೆಳಗಿಳಿಸಿ ತಾನು ಹಿಂಬಾಗಿಲ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವ ಒಂದು ಸಂಚನ್ನು ರೂಪಿಸಿದೆ. ನಾನೇನೂ ಭಾರತೀಯ ಜನತಾ ಪಕ್ಷದ ಬೆಂಬಲಿಗನಲ್ಲ. ಕರ್ನಾಟಕವನ್ನು ಲೂಟಿ ಮಾಡುತ್ತಿರುವ ರೆಡ್ಡಿ (ರೌಡಿ) ಸಹೋದರರು ಹಾಗೂ ಶ್ರೀರಾಮುಲು ಎಂಬ ಖೂಳ, ಕನ್ನಡವಿರೋಧಿಗಳು ಕರ್ನಾಟಕವನ್ನು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿರುವವರೆಗೆ ಕರ್ನಾಟಕದ ಉದ್ದಾರ ಸಾಧ್ಯವಿಲ್ಲ. ಆದರೆ ಬಿ.ಜೆ.ಪಿ. ಸರಕಾರ ಕೆಲವು ಉತ್ತಮ ಕೆಲಸ ಮಾಡುವುದಕ್ಕೆ ಕಾಂಗ್ರೆಸ್ ತನ್ನ ಪಾಖಂಡಿತನ ಪ್ರದರ್ಶಿಸಿ ತನ್ನ ಅಲ್ಪತನವನ್ನು ಜಗಜ್ಜಾಹೀರುಗೊಳಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಆಂದೋಲನದ ವಿರುದ್ಧ ಕಾಂಗ್ರೆಸ್ ಹಿಂಸಾತ್ಮಕ ಪ್ರತಿಭಟನೆ ಮಾಡುತ್ತಿರುವುದು ಆ ಪಕ್ಷಕ್ಕೆ ದೇಶದ ಬಗ್ಗೆ ಇರುವ ಕಾಳಜಿ ಹಾಗೂ ಭಯೋತ್ಪಾದಕರ ಪರವಾದ ನಿಲುವನ್ನು ತೋರಿಸುತ್ತದೆ. ಭಯೋತ್ಪಾದಕರು ಕೇವಲ ಮುಸಲ್ಮಾನರೆಂಬ ಒಂದೇ ಕಾರಣಕ್ಕೆ ಅವರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಪಕ್ಷ ಹಿಂದೂಗಳ, ಈ ರಾಷ್ಟ್ರದ ಬಗ್ಗೆ ತಿರಸ್ಕಾರದ ಭಾವನೆ ಹೊಂದಿರುವುದು ಇದರಿಂದ ಮನದಟ್ಟಾಗುತ್ತದೆ. ಅಲ್ಲದೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ, ಶೃತಿ ಮೇಲಿನ ಹಲ್ಲೆ (ಸಿ.ಪಿ.ಐ. ಕಾರ್ಯಕರ್ತರಿಂದ), ಒಬ್ಬ ಮುಸಲ್ಮಾನನಿಂದ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಅಯ್ಯಪ್ಪ ಭಕ್ತರು ರಕ್ಷಿಸಿ ಪೋಲಿಸರಿಗೆ ಒಪ್ಪಿಸಿದ ಘಟನೆಯನ್ನು ಬಿ.ಜೆ.ಪಿ.ಯ ತಲೆಗೆ ಕಟ್ಟುವ ಕಾಂಗ್ರೆಸ್‍ನ ನಿರ್ಧಾರ ಅದರ ರಾಜ್ಯದ್ರೋಹಿತನಕ್ಕೆ ಸಾಕ್ಷಿ. ಇಂತಹ ಘಟನೆಗಳನ್ನು ರಾಜಕೀಯಗೊಳಿಸಿ ಹೇಗಾದರೂ ಮಾಡಿ ಸರಕಾರವನ್ನು ಉರುಳಿಸಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಬೇಕೆಂಬ ಹಂಬಲ ಈ ಕಾಂಗ್ರೆಸ್‍ಗೆ. ಇದು ಕರ್ನಾಟಕದ ಜನತೆಗೆ ಕಾಂಗ್ರೆಸ್ ಮಾಡುತ್ತಿರುವ ದ್ರೋಹ. ಜನರಿಂದ ಆಯ್ಕೆಗೊಳಗಾದ ಒಂದು ಸರಕಾರವನ್ನು ತನ್ನ ತಿಪ್ಪೆ ಪ್ರತಿಭಟನೆಯಿಂದ ಉರುಳಿಸುವ ಹುನ್ನಾರ ಖಂಡನೀಯ. ಅಧಿಕಾರಕ್ಕೆ ಬಂದ ಕೂಡಲೇ ಮ್ಯಾಜಿಕ್ ಆಗಲು ಸಾಧ್ಯವಿಲ್ಲ. ಮುಂದಿನ ಐದು ವರ್ಷಗಳಲ್ಲಿ ಈ ಬಿ.ಜೆ.ಪಿ. ಸರಕಾರದ ಸಾಧನೆ ನೋಡಿ ಮತದಾರ ಮತ್ತೆ ತೀರ್ಪು ನೀಡುತ್ತಾನೆ. ಅದನ್ನು ಬದಲಿಸಲು ಈ ಕಾಂಗ್ರೆಸ್‍ಗೆ ಏನು ಹಕ್ಕಿದೆ?.

ಪ್ರಗತಿಪರ ಸಂಘಟನೆಗಳು ಮತ್ತು ಸಂಸ್ಕೃತಿ

ವ್ಯಾಲೆಂಟೈನ್ಸ್ ಡೇ ಯಾಕಾಗಿ ಆಚರಿಸುತ್ತಾರೆ?, ಅದು ಎಲ್ಲಿ ಹುಟ್ಟಿತು, ಅದರ ನಿಜವಾದ ಮಹತ್ವವೇನು ಎಂಬುದನ್ನು ಅರಿಯದೆ, ಕೇವಲ ಕಾಮ ತೀಟೆ ಪೂರೈಸಿಕೊಳ್ಳಲು ಒಂದು ದಿನವನ್ನು ಮೀಸಲಾಗಿಟ್ಟಿರುವುದು ನಮ್ಮ ದೇಶದ ದೊಡ್ಡ ದುರಂತ. ಶ್ರೀರಾಮ ಸೇನೆಯ ದಾಳಿಯನ್ನು ನಾನು ಖಂಡಿಸಿದರೂ, ಆ ದಾಳಿಯ ಹಿಂದಿನ ಉದ್ದೇಶಕ್ಕೆ ಬೆಂಬಲ ನೀಡುತ್ತೇನೆ. ಕೆಲ ಪ್ರಗತಿಪರ ಸಂಘಟನೆಗಳೆಂದು ತಮ್ಮನ್ನು ತಾವೇ ಕರೆದುಕೊಂಡಿರುವ ಕೆಲ ಸಂಘಟನೆಗಳು ಈ ವ್ಯಾಲೆಂಟೈನ್ಸ್ ಡೇಯನ್ನು ಬೆಂಬಲಿಸಿ ಬಹಿರಂಗವಾಗಿ ಕಾಮ ಪ್ರಚೋದನೆಗೆ ಬೆಂಬಲ ನೀಡಿವೆ. ಅಲ್ಲದೆ ಇದೇ ಕಾರಣಕ್ಕಾಗಿ ಶ್ರೀರಾಮ ಸೇನೆಗೆ ಪೆಬ್ರವರಿ ೧೪ರ ದಿನದಂದು ಕಾಂಗ್ರೆಸ್ ಮತ್ತು ಈ ಪ್ರಗತಿಪರ ಸಂಘಟನೆಗಳು ಶ್ರೀರಾಮ ಸೇನೆಯ ಹೆಸರಿನಲ್ಲಿ ದಾಂಧಲೆ, ಅತ್ಯಾಚಾರ ಮಾಡಿ ರಾಜ್ಯದ ಬಿ.ಜೆ.ಪಿ. ಸರಕಾರದ ಮೇಲೆ ಗೂಬೆ ಕೂರಿಸುವ ಕಾರ್ಯಕ್ರಮದ ವಾಸನೆ ಬಡಿದ ಕೂಡಲೇ, ತನ್ನ ಪ್ರತಿಭಟನೆಯನ್ನು ಸಾಂಕೇತಿಕವಾಗಿ ಆಚರಿಸುವ ನಿರ್ಧಾರ ಕೈಗೊಂಡು ಉತ್ತಮ ಕೆಲಸ ಮಾಡಿದೆ.

ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ವ್ಯಾಲೆಂಟೈನ್ಸ್ ಡೇ

ವ್ಯಾಲೆಂಟೈನ್ಸ್ ಡೇ ನೆಪದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ವ್ಯಾಪಾರವನ್ನು ಜಬರ್ದಸ್ತಾಗಿ ಮಾಡಿ, ಭಾರತೀಯರಿಂದ ಹಣವನ್ನು ಕಸಿದು ಅವರನ್ನು ಮೂರ್ಖರನ್ನಾಗಿಸುವ ಹುನ್ನಾರ ನಮ್ಮ ಈ ಅಧಮರಿಗೆ ಹೇಗೆ ಅರ್ಥವಾಗಬೇಕು?. ಕೇವಲ ಬಿ.ಜೆ.ಪಿ. ಬೆಂಬಲಿತ ಸಂಘಟನೆಯೊಂದು ಅದರ ವಿರುದ್ಧ ಆಂದೋಲನ ನಡೆಸುತ್ತಿರುವ ಒಂದೇ ಕಾರಣಕ್ಕಾಗಿ ಅದಕ್ಕೆ ಬೆಂಬಲ ಸೂಚಿಸುವ ಸಂಸ್ಕೃತಿ ಲಂಪಟರ ಕೈಯಿಂದ ನಮ್ಮ ದೇಶವನ್ನು ರಕ್ಷಿಸಬೇಕಾಗಿದೆ. ಪ್ರಗತಿಪರರೆಂದು ಕರೆದುಕೊಳ್ಳುವ ಕೆಲವು ಪುಡಿ ರೌಡಿಗಳು, ಸಮಾಜದ್ರೋಹಿಗಳು ಈ ದಿನದ ಸದುಪಯೋಗ(ದುರುಪಯೋಗ) ಪಡೆದುಕೊಂಡು, ದಾಂಧಲೆ, ಹಲ್ಲೆ, ಅತ್ಯಾಚಾರ ನೆಡೆಸಿ ಅದನ್ನು ಸರಕಾರದ ತಲೆಗೆ ಕಟ್ಟಿ, ಸರಕಾರ ಉರುಳಿಸಿ, ಕಾಂಗ್ರೆಸ್‍ಗೆ ಬೆಂಬಲ ನೀಡುವ ಹುನ್ನಾರ ಖಂಡನೀಯ. ಇದಕ್ಕೆ ಬಹುರಾಷ್ಟ್ರೀಯ ಕಂಪೆನಿಗಳ ಬೆಂಬಲವೂ ಇರುವುದು ಆತಂಕದ ವಿಷಯ. ಅಲ್ಲದೆ ಇದನ್ನು ಅರ್ಥಮಾಡಿಕೊಳ್ಳದಿರುವ ನಮ್ಮ ಭಾವೀ ಪ್ರಜೆಗಳು ತಿಪ್ಪೆ ರಾಜಕೀಯದ ಬಲೆಗೆ ಬಿದ್ದು, ತಮ್ಮ ಶೀಲ ಕಳೆದುಕೊಂಡಾದರೂ ಸರಿ ವ್ಯಾಲೆಂಟೈನ್ಸ್ ಡೇ ಆಚರಿಸುವುದಾಗಿ ಬಹಿರಂಗವಾಗಿ "Pub Bharo, Hug Karo" ಎಂಬ ಅಭಿಯಾನ ಆರಂಭಿಸಿರುವುದು ಅವರ ನೀಚತನವನ್ನು ತೋರಿಸುತ್ತದೆ. ಈ ರಾಜಕೀಯ ಬಲೆಯಿಂದ ಅವರು ಹೊರಬಂದು ತಮ್ಮ ಆತ್ಮ ಸಾಕ್ಷಿಯಂತೆ ನಡೆದುಕೊಂಡರೆ ಎಲ್ಲರಿಗೂ ಕ್ಷೇಮ.

Friday, February 06, 2009

ಸಚಿವೆ ರೇಣುಕಾ ಚೌಧರಿ ಮತ್ತು ’ವ್ಯಾ’ಲೆಂಟೈನ್ಸ್ ಡೇ

ಇವತ್ತಿನ DNA ದಿನಪತ್ರಿಕೆಯ ತಲೆಬರಹದಲ್ಲಿ ರೇಣುಕಾ ಚೌಧರಿ ಎನ್ನುವ ಒಬ್ಬ ಮಹಿಳೆಯ ಹೇಳಿಕೆಯನ್ನು ಈ ರೀತಿ ಪ್ರಕಟಿಸಲಾಗಿತ್ತು.
ಈ ಹೇಳಿಕೆಯನ್ನು ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರಿಗೆ ಹೇಳಿದ್ದು.
"He is not married. He doesn't know what to do. That's his problem. I might land where he is on Feb 14...and give him more than just roses".
ಇದರ ಒಳಾರ್ಥ ಏನು?. And give him more than just roses ಅಂದರೆ ಏನು?. ಅವಳು ಕ್ರಿಶ್ಚಿಯನ್ ಆಗಿ ಪರಿವರ್ತನೆ ಆದರೆ ಎಲ್ಲರೂ ಅದೇ ರೀತಿ ಆಗಬೇಕಿಲ್ಲವಲ್ಲ?. ಇಂತಹ ಹೇಳಿಕೆಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಎಂಥಹ ಭಾವನೆಗಳನ್ನು ಹುಟ್ಟು ಹಾಕುತ್ತವೆ ಎಂಬುದು ಈ ಮಹಿಳೆಗೆ ತಿಳಿದಿದೆಯೇ?. ಅಂದರೆ ವೇಶ್ಯಾವಾಟಿಕೆಯನ್ನು ಅವಳು ಪರೋಕ್ಷವಾಗಿ ಬೆಂಬಲಿಸಿದಂತಾಗಿದೆ. ಒಬ್ಬ ಮಹಿಳೆ ಬಹಿರಂಗವಾಗಿ ಇಂತಹ ಹೇಳಿಕೆಯನ್ನು ಕೊಡುತ್ತಿದ್ದರೆ ವ್ಯಾಲೆಂಟೈನ್ಸ್ ಡೇ ಎಂಬ ವೇಶ್ಯಾವಾಟಿಕೆಯನ್ನು ಪ್ರೋತ್ಸಾಹಿಸುವ ಆಚರಣೆಗಳು ನಮ್ಮ ದೇಶದಲ್ಲಿ ಹೆಚ್ಚಾಗುತ್ತವೆ.

ವ್ಯಾಲೆಂಟೈನ್ಸ್ ಡೇ ಬೇಕೇ?

ಈ ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ವನ್ನು ನಮ್ಮ ದೇಶದಲ್ಲಿ ಆಚರಿಸುವ ಪ್ರಮೇಯವಿದೆಯೇ?. ಪಾಶ್ಚಾತ್ಯ ದೇಶಗಳಲ್ಲಿ ಪ್ರೀತಿ ಮಾಡಲೂ ಪುರುಸೊತ್ತು ಸಿಗದ ಕಾರಣ ಅವರು Father's Day, Mother's Day, Grand Father's Day, Grand mother's Day, Valentain's Day ಮುಂತಾದ ದಿನಗಳನ್ನು ಆಚರಿಸುತ್ತಾರೆ. ಅವರು ವರ್ಷಕ್ಕೆ ಒಂದೇ ದಿನ ಪ್ರೀತಿಸುವುದು. ಆದರೆ ವರ್ಷವಿಡೀ ಪ್ರೀತಿಸುವ ನಮಗೆ ಈ ಅಸಭ್ಯ ಸಂಸ್ಕೃತಿ ಬೇಕೆ?. ಇದು ನಮ್ಮ ದೇಶದಲ್ಲಿ ಕೇವಲ ಶೋಕಿಯ, ವೇಶ್ಯಾವಾಟಿಕೆಯನ್ನು ಪ್ರಚೋದಿಸುವ, ವ್ಯಭಿಚಾರವನ್ನು ಪ್ರಚೋದಿಸುವ, ಕಾಮುಕತೆಯನ್ನು ತೋರ್ಪಡಿಸುವ ಒಂದು ದಿನವಾಗಿದೆ.

ಈಗ ನಾವೆಲ್ಲರೂ ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಡಬೇಕಾದ ಅನಿವಾರ್ಯತೆ ಇದೆ. ಇದರಲ್ಲಿ ಎಲ್ಲಾ ಮಹಿಳೆಯರೂ, ಪುರುಷರೂ ಕೈಜೋಡಿಸಬೇಕಾಗಿದೆ. ಈ ಹೋರಾಟದಲ್ಲಿ ಎಲ್ಲರೂ ಭಾಗಿಯಾಗದಿದ್ದರೂ ಕನಿಷ್ಠ ಪಕ್ಷ ಗರಿಷ್ಠ ಮಟ್ಟದಲ್ಲಿ ಭಾಗಿಯಾಗಬೇಕಾಗಿದೆ. ಆದರೆ ಇದರಲ್ಲಿ ಯಾರನ್ನೂ ನಾವು ಬಲವಂತ ಮಾಡಲಾಗುವುದಿಲ್ಲ, ಏಕೆಂದರೆ ಇದು ಭಾರತ ಸ್ವಾಮೀ....ಎಲ್ಲರಿಗೂ ಇಲ್ಲಿ ಎನು ಮಾಡಲೂ ಸ್ವಾತಂತ್ರ್ಯವಿದೆ.