Tuesday, January 24, 2012

ಚಂಪಾ ಎಂಬ ’ಬುದ್ದಿಜೀವಿ

ಇತ್ತೀಚೆಗೆ ವಿ.ಕ.ದಲ್ಲಿ ಪ್ರಕಟವಾದ ಚಂಪಾ ಅವರ ಲೇಖನ ಓದಿ ಖೇದವಾಯಿತು. ಕೇವಲ ಬ್ರಾಹ್ಮಣರನ್ನು ದ್ವೇಷಿಸುವುದನ್ನೇ ಕಾಯಕವಾಗಿಸಿಕೊಂಡಿರುವ ಈ ಚಂಪಾ ಎಂಬ ’ಬುದ್ದಿಜೀವಿ’ಯ ಬಗ್ಗೆ ಅಸಹ್ಯದ ಜೊತೆಗೆ ಅನುಕಂಪವೂ ಉಂಟಾಯಿತು.

ಅಸಹ್ಯ ಏಕೆಂದರೆ ಕಾಂಗ್ರೆಸ್ ರಾಜಕಾರಣಿಗಳ ಹಿಂದೂ ವಿರೋಧಿ ಧೋರಣೆಯ ಥರ ಇಲ್ಲಿ ಬ್ರಾಹ್ಮಣ ವಿರೋಧವನ್ನೇ ತನ್ನ ಕಾಯಕವಾಗಿಸಿಕೊಂಡು ತಾನು ರಾಜಕೀಯ ನೆಲೆ ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ ಚಂಪಾ. ಅನುಕಂಪ ಏಕೆಂದರೆ ಊರು ಹೋಗು, ಕಾಡು ಬಾ ಅನ್ನುವ ಪರಿಸ್ಥಿತಿಯಲ್ಲಿರುವ ಚಂಪಾ ಬ್ರಾಹ್ಮಣರ ವಿರೋಧ ಕಟ್ಟಿಕೊಳ್ಳಲು ಹೊರಟಿರುವುದು. ಕೇವಲ ಬ್ರಾಹ್ಮಣ ಎನ್ನುವ ಕಾರಣಕ್ಕೆ ಮಾತ್ರ ಶ್ರೀ ಅನಂತಮೂರ್ತಿಯವರನ್ನು ವಿರೋಧಿಸುವ ಇಂತಹ ಜಾತಿವಾದಿಗಳಿಂದ ನಮ್ಮ ಸಮಾಜಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಅಲ್ಲದೆ ಈ ಚಂಪಾ ತಾನು ಕನ್ನಡದ ಮೇರು ಸಾಹಿತಿ, ಕರ್ನಾಟಕ ರತ್ನ, ಜ್ಞಾನಪೀಠ ಪ್ರಶಸ್ತಿ ತನಗೆ ಬಂದಿಲ್ಲ, ಕೇವಲ ಬ್ರಾಹ್ಮಣ ಸಾಹಿತಿಗಳಿಗೆ ಮಾತ್ರ ಸಿಗುತ್ತಿದೆ ಎಂಬ ವಿತಂಡ ವಾದವನ್ನು ಮಾಡುತ್ತಿರುವುದನ್ನು ನೋಡುತ್ತಿದ್ದರೆ ಇವರ ಮಾನಸಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬ ಸಂಶಯ ಮೂಡುವುದು ಸಹಜ. ಅದೂ ಅಲ್ಲದೆ ಈ ಸಾಹಿತಿಗೆ ಸಂಸ್ಕೃತ ವ್ಯಾಕರಣ ಜ್ಞಾನ ಕೂಡ ಇಲ್ಲದಿರುವುದು ಖೇದನೀಯ. "ಬ್ರಾಹ್ಮಣೋ ಬಹುಜನ ಪ್ರಿಯಃ" ಎಂಬುದನ್ನು ಚಂಪಾರಂಥ ಕೆಲ ಬ್ರಾಹ್ಮಣ ವಿರೋಧಿಗಳು "ಬ್ರಾಹ್ಮಣೋ ಭೋಜನ ಪ್ರಿಯಃ" ಎಂದು ತಿದ್ದಿ ಬ್ರಾಹ್ಮಣರನ್ನು ಕೇವಲ ಭೋಜನ ಪ್ರಿಯರೆಂದು ಟೀಕಿಸಿರುವುದು, ಜಾತಿವಾದ ಇನ್ನೂ ಜೀವಂತ ಇದೆ ಎಂಬುದನ್ನು ತೋರಿಸಿಕೊಟ್ಟಿರುತ್ತಾರೆ. ಬ್ರಾಹ್ಮಣರು ಭೋಜನ ಪ್ರಿಯರಾದರೆ, ಉಳಿದ ಜಾತಿಯವರು ಯಾವುದರ ಪ್ರಿಯರು?. ಅಲ್ಲದೆ ಬ್ರಾಹ್ಮಣರು ಊಟ ಮಾಡಿದ ಎಲೆಯನ್ನೂ ತಿನ್ನುತ್ತಾರೆ ಎಂದು ಹೇಳಿ ತಾನೊಬ್ಬ ಎಂತಹ ನೀಚ ಸಾಹಿತಿ, ಬ್ರಾಹ್ಮಣರನ್ನು ತಾನು ಎಷ್ಟು ದ್ವೇಷಿಸುತ್ತೇನೆ ಎಂಬುದನ್ನು ಪ್ರಪಂಚಕ್ಕೆ ತಿಳಿಸಿದ್ದಾರೆ.

ಮಡೆಸ್ನಾನ ಎಂದರೆ ಬ್ರಾಹ್ಮಣರು ಉಂಡು ಬಿಟ್ಟ ಎಲೆಯಲ್ಲಿ ಹೊರಳಾಡುವುದು ಎಂಬುದಾಗಿ ತಿಳಿದುಕೊಂಡಿರುವ ಈ ಚಂಪಾರಂತಹ ಬ್ರಾಹ್ಮಣ ವಿರೋಧಿಗಳು, ಯಾವುದೋ ಊರಿನಲ್ಲಿ ಇತ್ತೀಚೆಗೆ ಕೆಳಜಾತಿಯವರು ಉಂಡ ಎಲೆಯಲ್ಲಿ ಬ್ರಾಹ್ಮಣರು ಮಡೆಸ್ನಾನ ಮಾಡಿದ್ದಕ್ಕೆ ಯಾವ ರೀತಿಯ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಮಡೆಸ್ನಾನ ಎನ್ನುವುದು ಒಂದು ನಂಬಿಕೆ, ಸಂಪ್ರದಾಯ ಅಷ್ಟೆ. ಅದು ಅವರವರ ನಂಬಿಕೆಗೆ ಬಿಟ್ಟ ವಿಷಯ. ಜನರ ನಂಬಿಕೆಯನ್ನು ಪ್ರಶ್ನಿಸುವ ಹಕ್ಕು ಇವರಿಗೆ ಇದೆಯಾ?. ಮುಂದೆ ಇವರು ದೇವಸ್ಥಾನಕ್ಕೆ ಹೋಗುವುದನ್ನೂ ಮಡೆಸ್ನಾನದಂತೆ ಅಸಹ್ಯ, ಮೂಢನಂಬಿಕೆ ಎಂದು ಹೇಳುವ ಕಾಲವೂ ಬರಬಹುದು. ಇಂತಹ ವಿತಂಡ ವಾದವನ್ನು ಮಂಡಿಸಿ ತಾನೊಬ್ಬ ಕರ್ನಾಟಕದ ಬುದ್ದಿಜೀವಿ ಸಂಘದ ಅಧ್ಯಕ್ಷ ಪಟ್ಟ ಅಲಂಕರಿಸಲು ಯೋಗ್ಯ ವ್ಯಕ್ತಿ ಎಂಬುದನ್ನು ಬಿಂಬಿಸಲು ಹೊರಟಂತಿದೆ ಈ ಚಂಪಾ. ಕೇವಲ ಹಿಂದೂ ಸಮಾಜದಲ್ಲಿ ನಡೆಯುವ ಕೆಲವು ಸಂಪ್ರದಾಯಗಳನ್ನೇ ಕೆದಕಿ ಅದರ ವಿರುದ್ದವಾಗಿ ದನಿಯೆತ್ತುವ ಇಂಥಹ ರಾಜಕಾರಣಿ ಸಾಹಿತಿಗಳು ಮುಸಲ್ಮಾನರಲ್ಲಿ ನಡೆಯುವ ಕೆಲ ಸಂಪ್ರದಾಯಗಳ ಬಗ್ಗೆ ದನಿಯೆತ್ತುವ ತಾಕತ್ತಿದೆಯೇ?. ಬರೆದಲ್ಲಿ ಮರುದಿನವೇ ಇವರಿಗೆ ಕಲ್ಲುಹೊಡೆಯುವುದರಲ್ಲಿ ಸಂಶಯವಿಲ್ಲ.

ಚಂಪಾರವರೇ ನಿಮಗೆ ಮಾಡಲು ಕೆಲಸವಿಲ್ಲದಿದ್ದರೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆಂದೋಲನದಲ್ಲಿ ಭಾಗವಹಿಸಿ. ದೇಶದಲ್ಲಿ ಅನೇಕ ಸಮಸ್ಯೆಗಳಿವೆ ಬೆಲೆ ಏರಿಕೆ, ಕಪ್ಪುಹಣ, ಭ್ರಷ್ಟಾಚಾರ, ನಕ್ಸಲ್ ಸಮಸ್ಯೆ....ಇದರ ವಿರುದ್ದವಾಗಿ ನೀವೇಕೆ ದನಿ ಎತ್ತುತ್ತಿಲ್ಲ?. ಕೇವಲ ಬ್ರಾಹ್ಮಣ ವಿರೋಧೀ ನಿಲುವು ತಳೆದು, ಬ್ರಾಹ್ಮಣರ ಏಳಿಗೆ ಸಹಿಸದೆ, ಬ್ರಾಹ್ಮಣರು ಸುಮ್ಮನಿದ್ದರೂ ಅವರ ಸಂಪ್ರದಾಯಗಳ ಮೇಲೆ ಹಲ್ಲೆ ನಡೆಸಿ ಅವರನ್ನು ಕೆಣಕುವ ಇಂತಹ ಸಾಹಿತಿಗಳಿಗೆ ಕಾಲವೇ ಬುದ್ದಿ ಕಲಿಸಬೇಕು.