Sunday, August 16, 2009

ಆಧುನಿಕ ಯುಗದ ಹೊಸ ತರಹದ ಭಿಕ್ಷಾಟನೆ

"ಸರ್ ನಮ್ಮ ಬಡಾವಣೆಯಲ್ಲಿ ಈ ಸಾರಿ ಗಣೇಶ ಕೂರಿಸುತ್ತಿದ್ದೇವೆ. ದಯವಿಟ್ಟು ಹಣ ಸಹಾಯ ಮಾಡಿ ಸಾರ್"
"ರೀ...ಕಳೆದ ಸಾರಿ ಕೇಳಿದಾಗ ಮುಂದಿನ ಸಲ ಕೊಡ್ತೀನಿ ಅಂದ್ರಲ್ಲಾ...ಈಗ ಬಂದಿದ್ದೀವಿ...ಚಂದಾ ಕೊಡಿ"
ಈ ಥರಾ ಹೊಸ ಶೈಲಿಯ ಡೈಲಾಗ್‍ಗಳನ್ನು ನೀವು ಈಗಾಗಲೇ ಕೇಳಲು ಶುರುಮಾಡಿರಬಹುದು. ಅದೇರೀ.....ಗೌರಿ ಗಣೇಶ ಹಬ್ಬ ಬರುತ್ತಿದೆಯಲ್ಲಾ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ಅಪಾಪೋಲಿಗಳು, ಪುಡಿರೌಡಿಗಳು, ಪೋಕರಿಗಳು ಈಗಾಗಲೇ ಚಂದಾ ವಸೂಲಿಗೆ ಶುರು ಮಾಡಿದ್ದಾರೆ. ಮನೆ ಮನೆಗೆ ಭೇಟಿ ನೀಡುವ ಈ ನೀಚರು ಬಲವಂತವಾಗಿ, ಜೋರು ಮಾಡಿ, ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದಾರೆ. ಗಣೇಶನ ಹೆಸರಿನಲ್ಲಿ ಹಣ ವಸೂಲಿ ಮಾಡಿ, ಗಣೇಶನನ್ನು ನೀರಿಗೆ ಹಾಕಿದ ಮೇಲೆ, ಅನೇಕ ಮಂದಿ ಕುಡಿದು, ಅಮಲೇರಿ ಚರಂಡಿಯಲ್ಲಿ ಬಿದ್ದು ಹೊರಳಾಡಿ, ಅದರಲ್ಲೇ ಸಾರ್ಥಕತೆಯನ್ನು ಪಡೆಯುತ್ತಾರೆ. ತಮ್ಮ ಜೀವನ ಈ ಒಂದು ವರ್ಷದ ಮಟ್ಟಿಗೆ ಸಾರ್ಥಕವಾಯಿತು ಎಂದು ಭಾವಿಸಿ, ಮರುದಿನ ಏನೂ ನಡೆದೇ ಇಲ್ಲವೆಂಬಂತೆ ಮಾಮೂಲಿಯಾಗಿದ್ದುಬಿಡುತ್ತಾರೆ.

ಎಲ್ಲರೂ ಈ ಥರಾ ಮಾಡುತ್ತಾರೆಂದಲ್ಲ. ಇದರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಚಂದಾ ವಸೂಲು ಮಾಡಿದರೂ ಒಳ್ಳೆ ಕೆಲಸ ಕಾರ್ಯ ಹಮ್ಮಿಕೊಳ್ಳುತ್ತಾರೆ. ಶ್ರೀ. ಬಾಲಗಂಗಾಧರ ತಿಲಕರು ಈಗ ಬದುಕಿದ್ದಿದ್ದರೆ ಖಂಡಿತಾ ಈ ಜನ ಜನರ ಒಗ್ಗಟ್ಟಿಗೆ ಹುಟ್ಟು ಹಾಕಿದ ಈ ಗಣೇಶೋತ್ಸವವನ್ನು ನಿಷೇಧ ಮಾಡಿ ಎಂದು ಸರಕಾರವನ್ನು ಕೋರಿಕೊಳ್ಳುತ್ತಿದ್ದರೋ ಏನೋ.

ಬಡ ಮಕ್ಕಳಿಗೆ ಸಹಾಯ, ಬಡಾವಣೆಯಲ್ಲಿ ಹೊಸ ಶಾಲೆ ಪ್ರಾರಂಭ, ಅನಾಥಾಲಯಗಳಿಗೆ ಸಹಾಯ, ಹೊಸ ಆಸ್ಪತ್ರೆಗಳ ಪ್ರಾರಂಭಕ್ಕೆ ಸಹಾಯ....ಮುಂತಾದ ಒಳ್ಳೆಯ ಕಾರ್ಯಕ್ರಮಗಳನ್ನು ಈ ಸಂಘಟನೆಗಳು ಹಮ್ಮಿಕೊಂಡಲ್ಲಿ, ಈ ಸಾರ್ವಜನಿಕ ಗಣೇಶೋತ್ಸವಕ್ಕೆ ಒಂದು ಹೊಸ ಅರ್ಥ ಬರುತ್ತದೆ.

ಎಲ್ಲ ಸಂಘಟನೆಗಳಲ್ಲಿ ಮನವಿ ಎಂದರೆ..."ದಯವಿಟ್ಟು ಈ ಸಾರ್ವಜನಿಕ ಗಣೇಶೋತ್ಸವವನ್ನು ಒಳ್ಳೆಯ ಕಾರ್ಯಗಳಿಗೆ ಸಹಾಯವಾಗುವ ಹಾಗೆ ಮಾಡಿ. ಅನ್ಯಧರ್ಮೀಯರು ಕೇವಲವಾಗಿ ಮಾತಾಡುವ ಹಾಗೆ ಮಾಡಬೇಡಿ."
"ನಿಮ್ಮ ಕೈಯಲ್ಲಿ ಸಾಧ್ಯವಾದರೆ ನೀವೇ ಮಾಡಿ, ಅದಕ್ಕೆ ಬಲವಂತದ ಚಂದಾ ವಸೂಲಿ ಮಾಡಿ, ದ್ವೇಷದ ವಾತಾವರಣ ಸೃಷ್ಟಿಯಾಗುವ ಹಾಗೆ ದಯವಿಟ್ಟು ಮಾಡಬೇಡಿ."

"ಶ್ರೀ. ಬಾಲಗಂಗಾಧರ ತಿಲಕರ ಕನಸು ನನಸು ಮಾಡಿ"