Tuesday, January 27, 2009

ಮಹಿಳಾ ಸಂಘಟನೆಗಳ ಸಮರ್ಥನೆ ಕಳವಳಕಾರಿ

ಬೆಂಗಳೂರು ಜನವರಿ ೨೭:ಮಂಗಳೂರಿನಲ್ಲಿ ಪಬ್‌ನಲ್ಲಿ ಕುಳಿತು ಬಿಯರ್ ಹೀರುತ್ತಿದ್ದ ಹುಡುಗಿಯರ ಮೇಲೆ ಕೆಲವರು ಹಲ್ಲೆ ಮಾಡಿರುವುದು ಖಂಡನೀಯವೇ ಆದರೂ ಕೆಲ ಮಹಿಳಾ ಸಂಘಟನೆಗಳು ಪರೋಕ್ಷವಾಗಿ ಹಾಗೂ ಧೈರ್ಯವಾಗಿ ಆ ಹುಡುಗಿಯರ ಪರವಾಗಿ ವಾದಿಸುತ್ತಿರುವುದು ನಮ್ಮ ದೇಶ ಯಾವ ಪಥದತ್ತ ಸಾಗುತ್ತಿದೆ ಎಂಬುದನ್ನು ಊಹಿಸಲೂ ಕಷ್ಟ ಸಾಧ್ಯವಾಗುತ್ತಿದೆ.

ಮಹಿಳೆಯರಿಗೆ ಸ್ವಾತಂತ್ರ್ಯ ಅತಿಯಾಯಿತೆ?

ಈ ಪ್ರಶ್ನೆಯನ್ನು ಭಾರತದ ಪ್ರತೀ ಮಹಿಳೆಯೂ ತನ್ನ ಅಂತರಾತ್ಮವನ್ನು ಕೇಳಿಕೊಳ್ಳಬೇಕಾಗಿದೆ. ಏಕೆಂದರೆ ಮಹಿಳೆಗೆ ದುಡಿಯುವ ಹಕ್ಕು, ಸಮಾಜದ ಎಲ್ಲ ಸ್ತರಗಳಲ್ಲಿಯೂ ಪುರುಷನ ಸಮಾನವಾಗಿ ಅವರನ್ನು ನೋಡುತ್ತಿರುವುದು ಇಂದು ಸಮಾಜದ ವಿಘಟನೆಗೆ ಕಾರಣವಾಗುತ್ತಿರುವುದು ಸುಳ್ಳಲ್ಲ. ಏಕೆಂದರೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿದ್ದರೆ ಸಹಜವಾಗಿ ಮನಸ್ತಾಪಗಳು ಬರುತ್ತವೆ. ಇವು "ಅಹಂ" ರೂಪವಾಗಿ ಪರಿವರ್ತನೆಯಾದಾಗ ಸಹಜವಾಗಿ ಮನೆಯಲ್ಲಿ ಕಿರಿಕಿರಿ, ಜಗಳ ಶುರುವಾಗುತ್ತದೆ. ಅಂದರೆ ಮಹಿಳೆ ಇವತ್ತು ದುಡಿಯುತ್ತಿರುವುದರಿಂದ ಸಹಜವಾಗಿ ತಾನು ಗಂಡಸಿನ ಅವಲಂಬನೆಯಿಲ್ಲದೆ ಬದುಕಬಲ್ಲೆನೆಂಬ ಒಂಥರಾ ಭಂಡ ಧೈರ್ಯ (ಒಂಥರಾ ಒಳ್ಳೆಯದೇ..ಕಷ್ಟಕಾಲದಲ್ಲಿ ಕೆಲ ಹೆಂಗಸರಿಗೆ ಇದು ಅನಿವಾರ್ಯ) ಮುಂದೆ ಅಹಂ ರೂಪ ತಳೆದಾಗ ಗಂಡ ಹೆಂಡಿರ ಮಧ್ಯೆ ಜಗಳ, ತಕರಾರುಗಳು ಕೋರ್ಟ್ ಮೆಟ್ಟಲು ಹತ್ತಿ ಮುಂದೆ ಡೈವೋರ್ಸ್ ಎಂಬುದರಲ್ಲಿ ಪರ್ಯವಸಾನವಾಗುತ್ತದೆ.

ಮಹಿಳಾ ಸಂಘಟನೆಗಳು ಮತ್ತು ಸ್ವಾತಂತ್ರ್ಯ

ಮಂಗಳೂರಿನಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡಾಗ, ಈಗಿನ ಕಾಲದಲ್ಲಿ ಮಹಿಳೆಯರು ಸಿಗರೇಟ್ ಸೇದುವುದು, ಪಬ್‍ನಲ್ಲಿ ಕುಳಿತು ಬಿಯರ್, ವಿಸ್ಕಿ ಹೀರುವುದು, ಬಾರ್‍ಗಳಲ್ಲಿ ಅರೆನಗ್ನವಾಗಿ ನೃತ್ಯ ಮಾಡುವುದು ಸಾಮಾನ್ಯ ವಿಷಯವಾಗಿದೆ ಹಾಗೂ ಸಮಾಜದಲ್ಲಿ ಇಂದು ನಡೆಯುತ್ತಿರುವ ಕ್ರೌರ್ಯ, ಅತ್ಯಾಚಾರ, ಕೊಲೆ, ಸುಲಿಗೆಗಳು ಮುಂತಾದ ಕೃತ್ಯಗಳಿಗೆ ಇದೂ ಒಂದು ಪರೋಕ್ಷ ಕಾರಣ. ಹಲ್ಲೆಯಿಂದ ಇದನ್ನು ತಡೆಗಟ್ಟಲು ಸಾಧ್ಯವಿಲ್ಲ, ಅಂದರೆ ಜಾಗತೀಕರಣ ಹಾಗೂ ಆಧುನಿಕ (ಪಾಶ್ಚಾತ್ಯ)ಸಂಸ್ಕೃತಿ ಮಹಿಳೆಯರ ಮೇಲೆ ಬೀರುತ್ತಿರುವ ಪರಿಣಾಮ ಕಳವಳಕಾರಿಯಾಗಿದೆ.

ರಾಜಕೀಯ ಪಕ್ಷಗಳು ಮತ್ತು ಹಿಂದುತ್ವ

ಜೆ.ಡಿ.ಎಸ್. ಪಕ್ಷದ ಕುಮಾರಸ್ವಾಮಿಯವರು ನೆನ್ನೆ ನಡೆದ ಮಂಗಳೂರಿನ ಘಟನೆಯ ಬಗ್ಗೆ ಮಾತನಾಡುತ್ತಾ "ಬಿ.ಜೆ.ಪಿ.ಯವರು ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಆಡುತ್ತಾರೆ." ಎಂದು ಹೇಳಿದರು.
"ಸ್ವಾಮೀ...ತಾವು ಯಾವ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದೀರಾ ಎಂದು ಹೇಳುತ್ತೀರಾ?. ನಾವೇನು ತಮ್ಮನ್ನು ಹಿಂದೂ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಳ್ಳಲು ತಡೆದಿಲ್ಲವಲ್ಲಾ?".

ರಾಜಕೀಯ ಪಕ್ಷಗಳು ಮತ್ತು ಮಹಿಳೆ:
ರೇಣುಕಾ ಚೌಧರಿ ಎಂಬ ಕಾಂಗ್ರೆಸ್ ಸಂಸದೆ, ಮಂಗಳೂರಿನ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು, ಆಕೆಗೆ ಮಹಿಳೆಯರ ಬಗೆಗೆ ಇರುವ ಕಾಳಜಿಯನ್ನು ತೋರಿಸುತ್ತದೋ ಅಥವಾ ಮಹಿಳೆಯರನ್ನು ಪರೋಕ್ಷವಾಗಿ ಬಾರ್ ಹಾಗೂ ಪಬ್‍ಗಳಲ್ಲಿ ಬಿಯರ್ ಕುಡಿಯಿರೆಂದು ಹೇಳುತ್ತಿದ್ದಾಳೋ ಒಂದೂ ಅರ್ಥವಾಗುವುದಿಲ್ಲ. ಆದರೆ ಇಂಥಹಾ ಒಂದು ಘಟನೆಗಳು ಮರ್ಯಾದಸ್ತ ಮಹಿಳೆಯರ ಜೀವನದ ಮೇಲೆ ಕರಿಛಾಯೆಯನ್ನು ಬೀರುವುದಂತೂ ಸಹಜ. ಏಕೆಂದರೆ ಕೆಲ ಮಹಿಳೆಯರು ಇವತ್ತು ಸಿಗರೇಟ್, ಮದ್ಯ, ಮಾದಕ ಪದಾರ್ಥಗಳ ದಾಸರಾಗಿ, ಹೈಟೆಕ್ ವೇಶ್ಯಾವೃತ್ತಿಗೂ ಇಳಿಯುತ್ತಿರುವುದೂ ಕೂಡಾ ಎಲ್ಲಾ ಮಹಿಳೆಯರು ಅದೇ ಥರಾ ಇರುತ್ತಾರೆಂಬ ಶಂಕೆ ಕೆಲ ಸಮಾಜಘಾತುಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಹಾಯಕಾರಿಯಾಗಿದೆ.

ಆದರೆ ತಂದೆ ತಾಯಿಗಳು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಎಚ್ಚರದಿಂದಿದ್ದಷ್ಟು ಕ್ಷೇಮ. ಏಕೆಂದರೆ ತಮ್ಮ ಮಕ್ಕಳಿಗೆ ಶಾಲೆಗೆ ಹೋಗುವಾಗಲೇ ಕೈಯಲ್ಲೊಂದು ಮೊಬೈಲ್, ಪಾಕೆಟ್ ಮನಿ ಮುಂತಾದುವುಗಳನ್ನು ಕೊಟ್ಟು ಓದಿಗಿಂತ ಇತರ ಚಟುವಟಿಕೆಗಳಿಗೇ ಹೆಚ್ಚು ಮಹತ್ವ ಬರುವಂತೆ ಮಾಡುತ್ತಾರೆ. ಇಂದಿನ ಹೆಣ್ಮಕ್ಕಳು ತಂದೆ ತಾಯಂದಿರ ಹಿಡಿತದಿಂದ ಸಡಿಲವಾಗುತ್ತಿರುವುದು ನಮ್ಮ ದೇಶದಲ್ಲಿ ಪಾಶ್ಚಾತ್ಯ ದೇಶಗಳಂತೆ ಡೈವೋರ್ಸ್ ಜಾಸ್ತಿಯಾಗಲು ಪರೋಕ್ಷವಾಗಿ ಕಾರಣವಾಗುತ್ತಿದೆ.

ನಾನು ಮಂಗಳೂರಿನ ಘಟನೆಯನ್ನು ಸಮರ್ಥಿಸುತ್ತಿಲ್ಲ. ಆದರೆ ಸಮಾಜದ ವಿಘಟನೆಯನ್ನು ತಡೆಯಲು ನಾವೆಲ್ಲ ಒಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ.ಇದನ್ನು ಪ್ರತಿಯೊಬ್ಬ ತಂದೆ ತಾಯಿ ಅರ್ಥ ಮಾಡಿಕೊಂಡರೆ...ಬಹುಶಃ ಸುಧಾರಣೆಯಾದೀತೇನೋ...

Wednesday, January 21, 2009

ಕೇಂದ್ರ ಸರಕಾರದಿಂದ ದೇಶದ ಜನರಿಗೆ ಮೂರು ನಾಮ?

ಬೆಂಗಳೂರು ಜನವರಿ ೨೧: ಕಳೆದ ವಾರವಷ್ಟೆ ದೂರದರ್ಶನದಲ್ಲಿ, ವೃತ್ತ ಪತ್ರಿಕೆಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಕ್ರಮವಾಗಿ ರೂ.೫, ರೂ೩ ಹಾಗೂ ರೂ.೨೫ ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಕಡಿಮೆ ಮಾಡಿರುವುದಾಗಿ ಕೇಂದ್ರ ಸರಕಾರ ಪ್ರಕಟಿಸಿತ್ತು.

ಆದರೆ ಇವತ್ತು ನಾನು ಪೆಟ್ರೋಲ್ ಬಂಕ್‌ಗೆ ಇಂಧನ ತುಂಬಿಸಿಕೊಳ್ಳಲು ಹೋದಾಗ ಆಘಾತ ಕಾದಿತ್ತು. ಬೆಲೆ ಏನೂ ಕಡಿಮೆ ಆಗಿರಲಿಲ್ಲ, ಇದ್ದಷ್ಟೇ ಇತ್ತು, ಕಾರಣ ಕೇಳಿದಾಗ ಹಾರಿಕೆಯ ಉತ್ತರ ಬಂತು....

ನಿಮಗೇನಾದರೂ ಗೊತ್ತಾ?. ಕೇಂದ್ರ ಸರಕಾರ ಸಾಮಾನ್ಯ ಜನರನ್ನು ಯಾವ ರೀತಿ ಮೋಸ ಮಾಡುತ್ತಿದೆ?.

"ಯಾರಿಗಾದರೂ ಉತ್ತರ ಗೊತ್ತಿದ್ದಲ್ಲಿ ದಯವಿಟ್ಟು ತಿಳಿಸಿ"

Sunday, January 18, 2009

ಕರ್ನಾಟಕ ರಕ್ಷಣಾ ವೇದಿಕೆಯ ವಿಶ್ವ ಕನ್ನಡ ಜಾಗೃತಿ ಸಮ್ಮೇಳನ


ಸಮ್ಮೇಳನದ ದ್ವಾರದಲ್ಲಿ ನೆರೆದ ಬೃಹತ್ ಜನಸ್ತೋಮ

ಸಮ್ಮೇಳನದ ಅದ್ದೂರೀ ವೇದಿಕೆ

ಕನ್ನಡಿಗರ ಉತ್ಸಾಹ

ಬ್ಯಾಂಡ್ ಬಾಜಾ

ಸಮ್ಮೇಳನದಲ್ಲಿ ಕಿಕ್ಕಿರಿದ ಜನಸ್ತೋಮ

ಕನ್ನಡಿಗರಿಗೆ ಎಚ್ಚರ ಹೇಳುವ ಫಲಕಗಳು

ಮತ್ತೊಂದು ಎಚ್ಚರ

ಊಟದ ಸಮಯ

ಅದ್ದೂರಿ ದ್ವಾರ

ದ್ವಾರದ ಮುಂದೆ ಜನಸ್ತೋಮ

ಊಟದ ತಯಾರಿ

ಬೆಂಗಳೂರು ಜನವರಿ ೧೮: ಕಣ್ತುಂಬಾ ಕನ್ನಡ ಬಾವುಟಗಳು, ಎಲ್ಲಾ ಮಂದಿಯ ಹೆಗಲ ಮೇಲೆ ಕನ್ನಡದ ಶಾಲುಗಳು, ಕಿವಿ ತುಂಬಾ ಕನ್ನಡ ಡಿಂಡಿಮ, ಉಸಿರೆಲ್ಲಾ ಕನ್ನಡತನ, ಬಾಯ್ತುಂಬಾ ಆತಿಥ್ಯದ ಸವಿ...ಎಲ್ಲೆಲ್ಲೂ ಹಬ್ಬದ ಸಡಗರ..ಇದು ಕನ್ನಡ ರಕ್ಷಣಾ ವೇದಿಕೆಯವರು ಆಯೋಜಿಸಿದ್ದ ವಿಶ್ವ ಕನ್ನಡ ಜಾಗೃತಿ ಸಮ್ಮೇಳನದ ವೈಶಿಷ್ಟ್ಯ ಎಂದರೆ ತಪ್ಪಾಗಲಾರದು. ಭೇಷ್...ನಾರಾಯಣ ಗೌಡ್ರೇ...

ಈ ಬಹುರಾಷ್ಟ್ರೀಯ ದಾಳಿಯಿಂದ ಇಂದು ಕನ್ನಡತನವನ್ನು ಜನ ಮರೆಯುತ್ತಿರುವ ಒಂದು ದಾರಿದ್ರ್ಯದ ಕಾಲದಲ್ಲಿ ಕನ್ನಡಿಗರ ಪಾಲಿಗೆ ಅಮೃತ ಸಿಂಚನದಂತೆ ಈ ಸಮ್ಮೇಳನ ಮೂಡಿ ಬಂದಿತು. ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ಈ ಸಮ್ಮೇಳನದ ಮುಖ್ಯ ದ್ವಾರವನ್ನು ಹಬ್ಬದ ಸಂಭ್ರಮವನ್ನು ಆಚರಿಸುವಂತೆ ಸಿಂಗರಿಸಲಾಗಿತ್ತು. ಮುಖ್ಯ ದ್ವಾರ ದಾಟುತ್ತಿದ್ದಂತೆ ದೂರದೂರಿನಿಂದ ಬಂದಿದ್ದ ಹಾಗೂ ಸಮ್ಮೇಳನಕ್ಕೆ ಬಂದಿದ್ದ ಎಲ್ಲರಿಗೂ ಬಿಸಿಬಿಸಿ ಊಟದ ತಯಾರಿ ನಡೆದಿತ್ತು.

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬುದಾಗಿ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಸರ್ವ ಧರ್ಮ ಸಮನ್ವಯ ನೀತಿಯನ್ನು ತನ್ನ ಸಂಘಟನೆಯ ಮೂಲಕ ಜಗತ್ತಿಗೆ ಸಾರಿ ಸಾರಿ ಹೇಳಿದೆ."ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ" ಎಂಬ ಘೋಷವಾಕ್ಯದೊಂದಿಗೆ ಕಳೆದ ಬಾರಿ ಭರ್ಜರಿಯಾಗಿ ಹಬ್ಬ ಆಚರಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ, ಈ ಬಾರಿ "ಕರ್ನಾಟಕದಿಂದ ಭಾರತ" ಎಂಬ ಘೋಷವಾಕ್ಯ ತನ್ನದಾಗಿಸಿದೆ. ಅಲ್ಲಲ್ಲಿ ಕನ್ನಡದ ಬಗ್ಗೆ ಘೋಷವಾಕ್ಯಗಳನ್ನು ಪ್ರದರ್ಶಿಸಲಾಗಿತ್ತು. ಹಸಿದ ಹೊಟ್ಟೆಗೆ ಭರ್ಜರಿ ಊಟ, ಬವಳಿದ ಕನ್ನಡಿಗನಿಗೆ ಅಮೃತ ಸಿಂಚನವನ್ನು ಈ ಸಮ್ಮೇಳನ ನೀಡಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಉದ್ಯಮಿ ಮೋಹನ್ ಆಳ್ವ ಹಾಗೂ ಪತ್ರಿಕಾ ರಂಗದ ಶ್ರೀ ಸತ್ಯನಾರಾಯಣ ಮೊದಲಾದವರು ಈ ಸಮ್ಮೇಳನದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಅವುಗಳಿಂದ ರಾಜ್ಯಕ್ಕಾಗುವ ನಷ್ಟ ಲಾಭಗಳ ಬಗ್ಗೆ ಮಾತುಗಳನ್ನಾಡಿದರು.

ಒಬ್ಬ ಕನ್ನಡಿಗನಾಗಿ ನನ್ನ ಅನಿಸಿಕೆ ಎಂದರೆ ನಮ್ಮ ಭಾಷಾಭಿಮಾನ ಕಡಿಮೆಯಾಯಿತು, ಅನ್ಯಭಾಷೀಯರಿಗೆ ತೋರುವ ಆದರ ಅತಿಯಾಯಿತು. ಈಗಲಾದರೂ ಎಚ್ಚೆತ್ತುಕೊಳ್ಳಿ ಕನ್ನಡಿಗರೇ...ಇಲ್ಲದಿದ್ದಲ್ಲಿ ನಾವು ಮಾದುವ ತಪ್ಪಿಗೆ ನಾಳೆ ನಮ್ಮ ಮಕ್ಕಳು, ಮೊಮ್ಮಕ್ಕಳು ಫಲ ಅನುಭವಿಸಬೇಕಾದೀತು.

Saturday, January 17, 2009

ಮರಾಠಿ ಪುಂಡರ ಸದ್ದಡಗಿಸಿ

ಬೆಂಗಳೂರು ಜನವರಿ ೧೭: ಬೆಳಗಾವಿಯಲ್ಲಿ ಕರ್ನಾಟಕ ಸರಕಾರ ತನ್ನ ಅಧಿವೇಶನವನ್ನು ನಡೆಸುತ್ತಿರುವುದು ಬೆಳಗಾವಿಯ ಸಕಲ ಕನ್ನಡಿಗರಿಗೆ ಹೆಮ್ಮೆ ತರುವ ವಿಚಾರ. ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಅಭಿವೃದ್ದಿಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕೂಗಿಗೆ ಸರಕಾರ ಸ್ಪಂದಿಸುತ್ತಿದೆ.

ಆದರೆ ಬೆಳಗಾವಿಯಲ್ಲಿ ಈ ಸರಕಾರದ ಅಧಿವೇಶನದ ವಿರುದ್ದವಾಗಿ ಮರಾಠಿ ಪುಂಡು ಪೋಕರಿಗಳು "ಮಹಾ ಮೇಳಾವ" ಎಂಬ ಸಮ್ಮೇಳನ ನಡೆಸುವುದಾಗಿ ಹೇಳಿ ತನ್ನ ರಾಜ್ಯದ್ರೋಹಿತನವನ್ನು ಸಾರಿದೆ. ಅಲ್ಲದೆ ಈಗ ಮಹಾರಾಷ್ಟ್ರದಲ್ಲಿ ಬೆಂಬಲ ಕಳೆದುಕೊಂಡಿರುವ, ರಾಷ್ಟ್ರೀಯವಾಗಿ ಚಿಂತನೆ ಮಾಡುವುದನ್ನು ಬಿಟ್ಟು ಈಗ ಕೇವಲ ಪ್ರಾದೇಶಿಕ ಸಂಕುಚಿತ ಭಾವನೆಯನ್ನು ತೋರ್ಪಡಿಸುತ್ತಿರುವ ಶಿವಸೇನೆ ಎಂಬ ಸಂಘಟನೆಯನ್ನು ಕೂಡಾ ಈ ಸಮ್ಮೇಳನಕ್ಕೆ ಆಮಂತ್ರಿಸಿರುವುದು ಕಳವಳಕಾರಿಯಾಗಿದೆ. ಶಿವಸೇನೆಯ ಬಾಳ್‌ಠಾಕ್ರೆ ಕೂಡಾ ಈಗ ಪ್ರಾದೇಶಿಕವಾಗಿ ಚಿಂತನೆ ಮಾಡುತ್ತಿರುವುದು ಶಿವಸೇನೆಯ ಅಧಃಪತನಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಎಂ.ಇ.ಎಸ್. ಎಂಬ ರಾಜ್ಯದ್ರೋಹಿ ಸಂಘಟನೆ ಬೆಳಗಾವಿಯಲ್ಲಿ ತನ್ನ ನೆಲೆ ಕಳೆದುಕೊಂಡಿದ್ದು, ತನ್ನ ಇರವನ್ನು ತೋರ್ಪಡಿಸುವುದಕ್ಕೋಸ್ಕರ ಪುಂಡಾಟಿಕೆಯನ್ನು ನಡೆಸುತ್ತಿರುವುದು ಅದರ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ.

ಬೆಳಗಾವಿಯಲ್ಲಿರುವ ಎಲ್ಲ ಮರಾಠಿ ಜನ ಯಾವುದೇ ರೀತಿಯ ಸಂಕುಚಿತ ಭಾವನೆ ಇಲ್ಲದೆ ಕನ್ನಡದವರೊಂದಿಗೆ ಹೊಂದಾಣಿಕೆಯಿಂದ ಬದುಕುತ್ತಿರುವುದು ಅಲ್ಲಿನ ಮರಾಠಿ ನಾಯಕರಿಗೆ ನುಂಗಲಾರದ ತುತ್ತಾಗಿತ್ತು. ರಾಜಕೀಯವಾಗಿ ತನ್ನ ನೆಲೆ ಭದ್ರ ಪಡಿಸಿಕೊಳ್ಳಲು ಈ ಎಂ.ಇ.ಎಸ್. ಎಂಬ ಭಯೋತ್ಪಾದಕ ಸಂಘಟನೆ ಅಲ್ಲಿನ ಕನ್ನಡಿಗರಿಗೆ ತೊಂದರೆ ಕೊಡುತ್ತಿದ್ದು, ಈಗ ಕನ್ನಡಿಗರು ಮರಾಠಿ ಜನರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದಾರೆಂದು ಆರೋಪಿಸಿ ತನ್ನ ನೀಚ ಬುದ್ದಿ ತೋರಿಸಿದೆ.

ಈ ಮರಾಠಿ ಬುದ್ದಿಗೇಡಿಗಳಿಗೆ ನಾವು "ದಂಡಂ ದಶಗುಣಂ" ಎಂಬಂತೆ...ಮಾತಲ್ಲಿ ಕೇಳದವನಿಗೆ ಚಾಟಿಯೇಟೇ ಸರಿ ಎಂದು ಹೊಡೆದು ಬುದ್ದಿ ಹೇಳಬೇಕಾಗಿದೆ. ಇಲ್ಲದಿದ್ದಲ್ಲಿ ಅಲ್ಲಿ ಮತ್ತೊಬ್ಬ ಕರುಣಾನಿಧಿ ಹುಟ್ಟುತ್ತಾನೆ. ನಿಮಗೆ ನಮ್ಮ ರಾಜ್ಯದ ಕಾನೂನಿನಂತೆ ನಡೆಯಲು ಆಗುವುದಿದ್ದರೆ ಇರಿ, ಇಲ್ಲವೇ ತೊಲಗಿ ಎಂದು ಹೇಳಬೇಕಾದ ಕಾಲ ಬಂದಿದೆ. ಇಲ್ಲದಿದ್ದಲ್ಲಿ ನಾಳೆ ಈ ಬಾಳಾ ಠಾಕ್ರೆ ಎಂಬ ಭಯೋತ್ಪಾದಕ ಬೆಳಗಾವಿಯಲ್ಲಿ ದಾಂಧಲೆ ನಡೆಸಲು ತನ್ನ ಶಿವಸೇನೆ ಎಂಬ ಉಗ್ರಗಾಮಿ (ಇತ್ತೀಚೆಗೆ ಪರಿವರ್ತಿತವಾದ) ಸಂಘಟನೆಗೆ ಆದೇಶ ನೀಡಿಯಾನು.

ಕನ್ನಡಿಗರೇ ಎದ್ದೇಳಿ....ಈ ಪುಂಡರಿಗೆ ಹೊಡೆದು ಬುದ್ದಿ ಹೇಳಿ...

Thursday, January 15, 2009

ನಿಮ್ಮ ಮೊಬೈಲ್ ಸಂಪಾದಿಸುತ್ತದೆಯೇ?



ಬೆಂಗಳೂರು ಜನವರಿ ೧೫ : ನಿಮ್ಮಲ್ಲಿರುವ ಮೊಬೈಲ್ ಹಣ ಸಂಪಾದನೆ ಮಾಡುತ್ತದೆಯೇ?. ಅದೂ ಕೇವಲ ಎಸ್.ಎಂ.ಎಸ್.ಗಳನ್ನು ಸ್ವೀಕರಿಸುವ ಮೂಲಕ.....

ಹೌದು....ನಿಮ್ಮ ನಗರದಲ್ಲಿರುವ ಅನೇಕ ಕಂಪೆನಿಗಳು, ಮಾಲ್‌ಗಳು ತಮ್ಮ ವಿಶೇಷ ರಿಯಾಯಿತಿ ದರಗಳ ಮಾರಾಟವನ್ನು ಈ ಎಸ್.ಎಂ.ಎಸ್.ಗಳ ಮೂಲಕ ಗ್ರಾಹಕರಿಗೆ ತಲುಪಿಸುತ್ತವೆ. ಇದನ್ನು ಸ್ವೀಕರಿಸುವ ನಿಮಗೆ ಪ್ರತೀ ಎಸ್.ಎಂಎಸ್.ಗೆ ೨೦ ಪೈಸೆಗಳನ್ನು ಈ ಕಂಪೆನಿಗಳು ನಿಮಗೆ ನೀಡುತ್ತವೆ. ಒಂದು ಸಾರಿ ನಿಮ್ಮ ಮೊತ್ತ ರೂ.೩೦೦ ಆದಲ್ಲಿ ನಿಮ್ಮ ಮನೆ ಬಾಗಿಲಿಗೇ ಚೆಕ್ ಬರುತ್ತದೆ. ನೀವೂ ಒಮ್ಮೆ ಪ್ರಯತ್ನಿಸಬಹುದು. ನೀವು ಇದನ್ನು ಬೇರೆಯವರಿಗೆ ತಿಳಿಸಿ ಅವರನ್ನೂ ಈ ಜಾಲಕ್ಕೆ ಸೇರಿಸಿಕೊಂಡಲ್ಲಿ ನಿಮ್ಮ ಮೊತ್ತ ಬಹು ಬೇಗ ಉಬ್ಬತೊಡಗುತ್ತದೆ.

ನೀವೂ ಯಾಕೆ ಪ್ರಯತ್ನಿಸಬಾರದು??????????????????

Sunday, January 11, 2009

ಜನಪದ ಜಾತ್ರೆ ಮತ್ತು ನಗೆ ಹಬ್ಬ






ಬೆಂಗಳೂರು ಜನವರಿ ೧೧: ಮೈನಡುಗುವ ಚಳಿಯಲ್ಲಿ ಭಾನುವಾರ ಸಂಜೆ ಆರು ಗಂಟೆಗೆ ಪರಿವಾರ ಸಮೇತ ಗಿರಿನಗರ ವಿವೇಕಾನಂದ ಪಾರ್ಕ್‌ಗೆ ಹೀಗೇ ಒಂದು ಸವಾರಿ ಹೊರಟಾಗ, ಪಕ್ಕದಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯವರು ಆಯೋಜಿಸಿದ್ದ "ಜನಪದ ಜಾತ್ರೆ ಮತ್ತು ನಗೆ ಹಬ್ಬ ೨೦೦೯" ಕಣ್ಣಿಗೆ ಬಿದ್ದಾಗ ಮನಸ್ಸು ಹಗುರ ಮಾಡಿಕೊಳ್ಳಲು ಅತ್ತ ಧಾವಿಸಿದೆ.

ಕರ್ನಾಟಕದ ಜನಪದ ನೃತ್ಯ ಡೊಳ್ಳುಕುಣಿತದೊಂದಿಗೆ ಆರಂಭವಾದ ಹಬ್ಬ ಮುಂದೆ ಕಂಸಾಳೆ ನೃತ್ಯ, ಚೆನ್ನಪಟ್ಟಣದ ಸಹೋದರಿಯರ "ಹಚ್ಚೇವು ಕನ್ನಡದ ದೀಪ" ಎಂಬ ಹಾಡಿಗೆ ಮಾಡಿದ ನೃತ್ಯ ಮನಸೆಳೆಯಿತು. ವಿ.ವಿ.ಪುರಂ ಕಾಲೇಜಿನ ವಿದ್ಯಾರ್ಥಿಗಳಿಂದ ಮನಮೋಹಕ ಪಟ ನೃತ್ಯ, ಕಂಸಾಳೆ ನೃತ್ಯ, ಜೋಗಿ ಚಿತ್ರದ ಹಾಡಿನ ನೃತ್ಯ, ಕೈಲಾಸಂ ಅವರ "ಕೊ ಕೊ ಕೊ ಕೋಳಿಕೆ ರಂಗ" ಎಂಬ ಹಾಡು....ಅದಾದ ಮೇಲೆ ಮಿಮಿಕ್ರಿ ಪಟು ಮೈಸೂರಿನ ರಮೇಶ್ ಬಾಬು ಅವರ ಕಾಮಿಡಿ ಕೂಡಾ ನಕ್ಕು ನಗಿಸುವಂತೆ ಮಾಡಿತು.

ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು (ಶಿವರಾಮೇ ಗೌಡರು), ಕಾರ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿಯವರು ಕನ್ನಡಿಗರ ಪರವಾಗಿ ಜೋರಾಗಿ ಗುಡುಗಿದರು. ಪರಭಾಷಾ ಅಧಮರಿಗೆ ಎಚ್ಚರಿಕೆಯನ್ನೂ ನೀಡಲಾಯಿತು.ಅಂತೂ ಭಾನುವಾರ ಒಂದು ಉತ್ತಮ ಕಾರ್ಯಕ್ರಮಕ್ಕೆ ಹಾಜರಾತಿ ಹಾಕಿದ್ದಕ್ಕೆ ಮನ ಹಗುರಾಯಿತು.ಇನ್ನೊಂದು ಬಹಳ ಸಂತಸದ ವಿಷಯವೆಂದರೆ ನನ್ನ ಮಗಳು ಪ್ರಥಮ ಬಾರಿಗೆ ಕನ್ನಡ ಸಂಘಟನೆಯೊಂದರ ಕಾರ್ಯಕ್ರಮದ ರಂಗಸ್ಥಳದಲ್ಲಿ ಎರಡು ಹಾಡು ಹಾಡಿದ್ದು. ಅಲ್ಲದೆ ಕನ್ನಡದ ಜನಪದ ನೃತ್ಯಗಳು, ಸಂಸ್ಕೃತಿಯ ಬಗ್ಗೆ ಜನರಿಗೆ ರಕ್ಷಣಾವೇದಿಕೆಯ ಅಧ್ಯ್ಕಕ್ಷರು, ಕಾರ್ಯದರ್ಶಿಗಳು ವಿದ್ಯಾವಂತ ಜನರಿಗೆ "ಬುದ್ದಿ" ಹೇಳಿದರು. Convent ಸಂಸ್ಕೃತಿ ಹೆಚ್ಚುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಒಂದು ಸುಂದರ ಸಂಜೆಯನ್ನು ಕಳೆದ ಅನುಭವ ಮನಕ್ಕೆ ಮುದ ನೀಡಿತು.

Friday, January 09, 2009

ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಸಾಮಾನ್ಯ ಜನರ ಮೇಲೆ ಅತ್ಯಾಚಾರ



ಬೆಂಗಳೂರು ಜನವರಿ ೯: ಈ ಲಾರಿ ಮುಷ್ಕರದಿಂದಾಗಿ ನಗರದ ಜನ ಹಾಹಾಕಾರ ಮಾಡುವಂತಾಗಿದೆ. ಡೀಸೆಲ್, ಪೆಟ್ರೋಲ್‌ಗೆ ಜನ ಬಂಕ್‌ಗಳಲ್ಲಿ ಸರತಿಯಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
ಕವಡೆ ಕಾಸಿನ ಬೆಲೆ ಇಲ್ಲದ ಕೇಂದ್ರ ಸರಕಾರ, ಸತ್ತು ಮಲಗಿರುವ ರಾಜ್ಯ ಸರಕಾರಗಳು ಈ ದುಸ್ಥಿತಿಗೆ ಕಾರಣವಾಗಿದೆ. ಅತ್ತ ಲಾರಿ ಮಾಲಿಕರ ಬೇಡಿಕೆಯನ್ನು ಈಡೇರಿಸಲಾಗದೆ, ಇತ್ತ ಎಸ್ಮಾ ಜಾರಿ ಮಾಡಲಾಗದೆ ಶಿಖಂಡಿಯಂತೆ ವರ್ತಿಸುತ್ತಿರುವ ಈ ಸರಕಾರಗಳು ಸಾಮಾನ್ಯ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿವೆ.
ಸದಾ ರಾಜಕೀಯ, ಮುಸ್ಲಿಂ ತುಷ್ಟೀಕರಣ, ಕ್ರಿಶ್ಚಿಯನ್ ತುಷ್ಟೀಕರಣದಲ್ಲಿ ಮುಳುಗಿರುವ ಕೇಂದ್ರ ಸರಕಾರ, ಗಣಿ ಲೂಟಿ ಮಾಡಿ ಕರ್ನಾಟಕವನ್ನು ಬರಿದು ಮಾಡುತ್ತಿರುವ ಬಿ.ಜೆ.ಪಿ., ಕಾಂಗ್ರೆಸ್, ಜೆ.ಡಿ.ಎಸ್. ಪಕ್ಷಗಳು ಇವತ್ತು ಒಬ್ಬರ ಮೇಲೆ ಒಬ್ಬರು ಕೆಸರೆರೆಚುತ್ತಿದ್ದಾರೆ. ಹುಟ್ಟಾ ಕ್ರಿಮಿನಲ್‌ಗಳಾದ ಬಳ್ಳಾರಿಯ ರೆಡ್ಡಿ ಸಹೋದರರು ಹಾಗೂ ರೌಡಿ ರಾಜಕಾರಣಿ ರಾಮುಲು ಅವರಂತಹ ನೀಚ ರಾಜಕಾರಣಿಗಳನ್ನು ತನ್ನ ಜೊತೆ ಇಟ್ಟುಕೊಂಡು ಬಿ.ಜೆ.ಪಿ. ಸರಕಾರ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದೆ. ಜನ ಸಾಮಾನ್ಯರ ಬೇಡಿಕೆ, ತೊಂದರೆಗಳನ್ನು ಬದಿಗೊತ್ತಿ ಕೇವಲ ಗಣಿದಣಿಗಳನ್ನು ಸಂಭಾಳಿಸುವುದರಲ್ಲೇ ಕಾಲ ಕಳೆಯುತ್ತಿರುವ ರಾಜ್ಯ ಸರಕಾರ ಇವತ್ತು ಅಸ್ಥಿರವಾಗಿದೆ.

ಕೇಂದ್ರ ಸರಕಾರವಂತೂ ಇದ್ದೂ ಸತ್ತಂತಾಗಿದೆ. ನರಸತ್ತ ನಾಮರ್ದನಂತೆ ದಿನಾ ಪಾಕಿಸ್ತಾನಕ್ಕೆ ಬುದ್ದಿ ಹೇಳುತ್ತಾ, ಮುಂಬೈ ದಾಳಿಯನ್ನು ಜನಮಾನಸದಲ್ಲಿ ಒಂದು ಇತಿಹಾಸವಾಗಿ ಮಾಡಿ ತನ್ನ ಮುಸ್ಲಿಂ ತುಷ್ಟೀಕರಣ ಮಾಡುತ್ತಾ, ತಾನೊಬ್ಬ ಮುಸ್ಲಿಂ ಜನಾಂಗದ ಪ್ರತಿನಿಧಿ ಎಂಬಂತೆ ವರ್ತಿಸುತ್ತಿದೆ. ಪಾಕಿಸ್ತಾನದ ಮೇಲೆ ದಾಳಿ ಮಾಡಲು ಮೀನ ಮೇಷ ಎಣಿಸುತ್ತಿರುವ ಕೇಂದ್ರ ಸರಕಾರ ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಹಿಂದೂ ರಾಷ್ಟ್ರ ಅಪಹಾಸ್ಯಕ್ಕೆ ಒಳಗಾಗುವಂತೆ ಮಾಡಿದ ಕೀರ್ತಿ ನಮ್ಮ ಘನ ಕೇಂದ್ರ ಸರಕಾರದ್ದು.

"ಒಟ್ಟಿನಲ್ಲಿ ಓಟು ಕೊಟ್ಟವ ಕೋಡಂಗಿ.....ಸೀಟಲ್ಲಿ ಕೂತವ ಈರಭದ್ರ"......

Friday, January 02, 2009

ಕನ್ನಡ ಜಾಗೃತಿ ವರ್ಷ ಮತ್ತು ಸಪ್ತ ಸೂತ್ರಗಳು

ಬೆಂಗಳೂರು ಜನವರಿ ೦೨: ರಾಜ್ಯದ ಇತಿಹಾಸದಲ್ಲೇ ಮೊದಲಾಗಿ ಡಾ. ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರಕಾರ ಕನ್ನಡದ ಬಗ್ಗೆ ರಾಜ್ಯ ಸರಕಾರದ ಕಾಳಜಿಯನ್ನು ತೋರ್ಪಡಿಸಿದೆ. ಅಂದರೆ ಅಧಿಕೃತವಾಗಿ ಈ ವರ್ಷವನ್ನು "ಕನ್ನಡ ಜಾಗೃತಿ ವರ್ಷ" ವನ್ನಾಗಿ ಘೋಷಿಸಿದೆ.

ಇಂದಿನಿಂದ (ಜನವರಿ ೨) ಅಂಗಡಿ ಮುಂಗಟ್ಟುಗಳ ಯಾವುದೇ ನಾಮಫಲಕಗಳಲ್ಲಿ ಕನ್ನಡ ಕಂಡುಬರದಿದ್ದರೆ ಹತ್ತು ಸಾವಿರ ರೂಪಾಯಿ ದಂಡ ವಿಧಿಸುವ ಕುರಿತು ಸರಕಾರ ಅಧಿಕೃತ ಘೋಷಣೆ ಮಾಡಿದೆ. ಇದು ಕನ್ನಡ ಅನುಷ್ಠಾನದ ಮೊದಲ ಹಂತವಾಗಿದೆ. ಈಗ ಬೆಂಗಳೂರಿನಲ್ಲಿರುವ ಕನ್ನಡ ವಿರೋಧಿಗಳಿಗೆ ಚುರುಕು ಮುಟ್ಟಿಸುವ ಒಂದು ಕ್ರಮವಾಗಿದೆ.
-------------------------------------------------------------------------------------
ಸಪ್ತ ಸೂತ್ರಗಳು :
೧. ನಮ್ಮ ಭಾಷೆ ಕನ್ನಡ, ಆಡಳಿತವು ಕನ್ನಡ.
೨. ನಾವು ಕನ್ನಡಿಗರು, ನಮ್ಮ ಶಿಕ್ಷಣ ಕನ್ನಡವಾಗಿರಲಿ.
೩. ನಮ್ಮ ವ್ಯವಹಾರ ಕನ್ನಡದಲ್ಲಿ, ನಾಮ ಫಲಕವೂ ಕನ್ನಡದಲ್ಲಿರಲಿ.
೪. ಕನ್ನಡ ನುಡಿ ಆಡೋಣ, ಕನ್ನಡ ಗಡಿ ಕಾಯೋಣ.
೫. ನೆಲ ನಮ್ಮದು, ಜಲ ನಮ್ಮದು, ಉದ್ಯೋಗ ಕನ್ನಡಿಗರಿಗೆ.
೬. ನಾವು ಕನ್ನಡಿಗರು, ನಮ್ಮ ಸಂಸ್ಕೃತಿ ಕನ್ನಡ.
೭. ಎಲ್ಲಿಂದಾದರೂ ಬಂದಿರಿ, ಯಾರಾದರೂ ಆಗಿರಿ, ಕನ್ನಡಿಗರಾಗಿರಿ.

-------------------------------------------------------------------------------------

ಇದಲ್ಲದೆ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಕನ್ನಡದಲ್ಲಿ ಶಿಕ್ಷಣಕ್ಕೆ ಕ್ರಮ. ಕನ್ನಡವನ್ನು ಪ್ರಥಮ ವಿಷಯವನ್ನಾಗಿ ಪಡೆದು, ಅದರಲ್ಲಿ ಶೇಕಡಾ ೮೦ಕ್ಕಿಂತ ಅಧಿಕ ಅಂಕ ಪಡೆದವರಿಗೆ ಸರಕಾರೀ ಉದ್ಯೋಗದಲ್ಲಿ ಆದ್ಯತೆ ಮೊದಲಾದ ಕನ್ನಡಕ್ಕೆ ಪೂರಕವಾದ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬೇಕಾಗಿದೆ. ಅಲ್ಲದೆ ಅನ್ಯ ಭಾಷಾ ಪತ್ರಿಕೆಗಳ ಮೇಲೆ ಅಧಿಕ ತೆರಿಗೆ ಹಾಕಿ ಅವುಗಳನ್ನು ನಿರ್ಬಂಧಿಸುವ ಕೆಲಸ ಮೊದಲು ಆಗಬೇಕು. ಏಕೆಂದರೆ ತಮಿಳುನಾಡು, ಆಂಧ್ರಪ್ರದೇಶಕ್ಕೆ ಹೋದರೆ ಅಲ್ಲಿ ನಮ್ಮ ಕನ್ನಡ ಪತ್ರಿಕೆ ಓದಲೂ ಸಿಗುವುದಿಲ್ಲ. ಆದರೆ ಕರ್ನಾಟಕದಲ್ಲಿ ರಾಜಾರೋಷವಾಗಿ ಪತ್ರಿಕೆ ಹಂಚುವ ಕೆಲಸ ಆಗುತ್ತದೆ. ಅಲ್ಲದೆ ಅನ್ಯ ಭಾಷಾ ಚಲನ ಚಿತ್ರಗಳನ್ನೂ ನಿರ್ಬಂಧಿಸುವ ಕೆಲಸ ಆಗಬೇಕು.

ಆದರೆ ಈ ಕೆಲಸ ಒಮ್ಮೆಗೇ ಆಗಲು ಸಾಧ್ಯವಿಲ್ಲ. ಹಂತ ಹಂತವಾಗಿ ಅವುಗಳನ್ನು ನಿರ್ಬಂಧಿಸಬೇಕು.ಇಲ್ಲದಿದ್ದಲ್ಲಿ ಅನ್ಯಭಾಷಿಗರ ಹಾವಳಿಯಿಂದಾಗಿ ನಾವು ನಮ್ಮ ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಕೇವಲ ಆಂಗ್ಲ ಹಾಗೂ ಕನ್ನಡ ಭಾಷೆಗಳಿಗೆ ಆದ್ಯತೆ ನೀಡಿ ಉಳಿದೆಲ್ಲಾ ಭಾಷೆಗಳ ಮಾಧ್ಯಮಗಳನ್ನು ಹಂತ ಹಂತವಾಗಿ ಮಟ್ಟ ಹಾಕುವ ಕೆಲಸ ಆಗಬೇಕು. ಇಲ್ಲದಿದ್ದಲ್ಲಿ ಬೆಂಗಳೂರು ಮತ್ತೊಂದು ಕಾಸರಗೋಡು ಆಗುವುದರಲ್ಲಿ ಸಂಶಯವಿಲ್ಲ.

ಆದ್ದರಿಂದ ರಾಜ್ಯ ಸರಕಾರ ತೆಗೆದುಕೊಂಡಿರುವ ಕ್ರಮಗಳಿಗೆ ಎಲ್ಲರೂ ತಮ್ಮ ಬೆಂಬಲ ನೀಡಿ ಕನ್ನಡವನ್ನು ಉಳಿಸುವತ್ತ್ತ, ಬೆಳೆಸುವತ್ತ ತಮ್ಮ ಕಿರುಕಾಣಿಕೆ ಸಲ್ಲಿಸಬೇಕಾಗಿ ಕಳಕಳಿಯ ಮನವಿ.