Saturday, May 24, 2008

ಬೆಂಗಳೂರು ತುಂಬೆಲ್ಲ ಉಗುಳು ಭಟರು!!!

ಬೆಂಗಳೂರು ಮೇ ೨೪: ಬೆಂಗಳೂರು ಎಷ್ಟು ಹೊಲಸಾಗಿದೆ ಎಂದರೆ ನೀವೇನಾದರೂ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ ಈ ಅನುಭವ ಆಗಿರಲಿಕ್ಕೆ ಸಾಕು. ಅಂದರೆ ನೀವು ಯಾವುದೇ ಬಿ.ಟಿ.ಎಸ್. ಬಸ್ಸನ್ನು ಓವರ್ ಟೇಕ್ ಮಾಡಿದಲ್ಲಿ ಈ ಅನುಭವ ಖಂಡಿತಾ ಕಾದಿದೆ.
ಬಸ್ಸಲ್ಲಿ ಕುಳಿತಿರುವ ಕೆಲವು ಪೋಲಿಗಳು ಯಾರಾದರೂ ಇದ್ದಾರಾ ಎಂದು ನೋಡದೇನೇ ಥೂ...ಎಂದು ಉಗಿಯುತ್ತಾರೆ. ಅದು ನಿಮ್ಮ ಮುಖದ ಮೇಲೆ, ಶಿರಸ್ತ್ರಾಣದ ಮೇಲೆ, ಅಂಗಿ ಮೇಲೆ ಬೀಳದೇ ಇರಲು ಸಾಧ್ಯವೇ ಇಲ್ಲ. ಪಾನ್ ಪರಾಗ್, ಎಲೆಅಡಿಕೆ, ಗುಟ್ಕಾ ಮುಂತಾದ ಅಮಲೇರಿಸುವ ಪದಾರ್ಥಗಳನ್ನು ತಿಂದು, ಹಂದಿಗಳಿಗಿಂತ ತಾನೇನೂ ಕಮ್ಮಿ ಇಲ್ಲವೆಂದು ತೋರಿಸಲು ಈ ರೀತಿ ಮಾಡುತ್ತಿರಬಹುದೇ?. ಇಂತಹ ಮೂರನೇ ವರ್ಗದ ಬುದ್ದಿ ಇರುವ ಜನ ದಿನೇ ದಿನೇ ಹೆಚ್ಚುತ್ತಿರುವುದು, ಐಟಿ ಸಿಟಿ ಎಂದು ಕರೆಸಿಕೊಳ್ಳುತ್ತಿರುವ ಬೆಂಗಳೂರಿಗೆ ಒಂದು ಕಪ್ಪು ಚುಕ್ಕೆಯಾಗಿದೆ.
ಹಸಿರು ನಗರ, ಗಾರ್ಡನ್ ಸಿಟಿ.....ಎಂದು ಕರೆಸಿಕೊಳ್ಳುತ್ತಿರುವ ನಗರ್ ಇತ್ತೀಚೆಗೆ ಈ ಉಗುಳು ಭಟರಿಂದಾಗಿ ಕ್ರಮೇಣ ಕೆಂಪು ಬಣ್ಣಕ್ಕೆ ತಿರುಗುತ್ತಿರುವುದು ವಾಸ್ತವವಾದರೂ ಕಟು ಸತ್ಯ. ಆದ್ದರಿಂದ ಈ ಉಗುಳು ಪ್ರಾಣಿಗಳಿಗೆ ಉಗುಳುವುದನ್ನು ನಿಲ್ಲಿಸಲು ಒಂದು ಕಾನೂನು ಜಾರಿಗೆ ತರಬೇಕಾದ ಅವಶ್ಯಕತೆಯಿದೆ. ಇವರಿಗೆ ಜೀವಾವಧಿ ಶಿಕ್ಷೆ ಕೊಟ್ಟರೂ ಕಡಿಮೆಯೇ......ಇನ್ನೂ ಉಗುಳು ನಿಲ್ಲಿಸದಿದ್ದಲ್ಲಿ ಜೀವನ ಪರ್ಯಂತ ಜೈಲಿಗೆ ಹಾಕಿ, ಅಲ್ಲೇ ಉಗುಳಲು ಒಂದು ಪ್ರತ್ಯೇಕ ತೊಟ್ಟಿಯನ್ನು ಕೊಟ್ಟು ಅವರನ್ನು ಅಲ್ಲೇ ತಮ್ಮ ಜೀವನದ ಅಂತಿಮ ಘಳಿಗೆ ಕಳೆಯಲು ಏರ್ಪಾಡು ಮಾಡಿ...ನಮ್ಮಂತಹ ದ್ವಿಚಕ್ರ ವಾಹನಸವಾರರನ್ನು ಈ ಉಗಿತದಿಂದ ಕಾಪಾಡಿ ಪುಣ್ಯಕಟ್ಟಿಕೊಳ್ಳಿ.

Friday, May 16, 2008

ಹಗಲು ದರೋಡೆಕೋರರ ನಗರ-ಬೆಂಗಳೂರು!!!!!!!!!!!!!!!!!!!!!!!!

ಬೆಂಗಳೂರು ಮೇ ೧೬: ಬೆಂಗಳೂರು ಐಟಿ ಸಿಟಿ, ಸಿಲಿಕಾನ್ ಹಬ್..........ಮುಂತಾದ ಹೆಸರಿನಿಂದ ಕರೆಯುವವರು ಇನ್ನೊಂದು ಹೆಸರೂ ಸೇರಿಸಿಕೊಳ್ಳುವುದು ಒಳ್ಳೆಯದು, ಅದು ಹಗಲುದರೋಡೆಕೋರರ ನಗರ.
ಇದಕ್ಕೆ ಕಾರಣ ಇದೆ. ಇಲ್ಲೇ ವಾಸವಾಗಿರುವವರಿಗೆ ಇದರ ಅನುಭವ ಈಗಾಗಲೇ ಆಗಿರಬಹುದು. ಇಲ್ಲಿದ್ದಾರೆ ದರೋಡೆಕೋರರು
  1. ಬೆಳಗ್ಗೆ ಎದ್ದಕೂಡಲೇ ಮನೆ ಬಾಗಿಲಿಗೆ ಕಸ ಒಯ್ಯುವ ವ್ಯಾನ್ ಬರುತ್ತದೆ. ತಿಂಗಳ ಮೊದಲ ದಿನವೇ..."ಸಾರ್ ಕಾಫಿಗೆ ಕಾಸ್ ಕೊಡಿ.." ಎಂದು ಅಂಗಾಲಾಚುತ್ತಾರೆ. "ಇಲ್ಲ" ಎಂದರೆ "ನಾಳೆಯಿಂದ ಕಸ ಹಾಕಬೇಡಿ" ಎಂದು ಮುಖಕ್ಕೆ ಹೊಡೆವ ಹಾಗೆ ಹೇಳುತ್ತಾರೆ. ಸರಕಾರಿ ಸಂಬಳ ಅಲ್ಲದೆ ಪ್ರತೀ ಮನೆಯಿಂದ ತಿಂಗಳಿಗೆ ಹತ್ತು ರೂಪಾಯಿ ಹಫ್ತಾ ವಸೂಲಿ ಮಾಡುತ್ತಾರೆ. ಮಾಡುವುದು ಮಾತ್ರ ಕಸ ಸಂಗ್ರಹಿಸುವ ಕೆಲಸ, ಆದರೆ ಎಲ್ಲರಿಗು ಬೆಂಗಳೂರಿನಲ್ಲಿ ಸ್ವಂತ ಮನೆ, ಕಾರು, ಸೈಟು ಎಲ್ಲ ಇದೆ. ನಮಗೇ ಇದೆಲ್ಲ ಇಲ್ಲ.ಇವರೆಲ್ಲ ಮಾಜಿ ಮುಖ್ಯಮಂತ್ರಿ S.M Krishna ನಿಂದ ತಯಾರಾದ ದರೋಡೆಕೋರರು. ಮಂಗಳೂರಿನ ಒಬ್ಬ ಕೈಗಾರಿಕೋದ್ಯಮಿ ಉಚಿತವಾಗಿ ಕಸ ಸಂಗ್ರಹಿಸುವ ಬಗ್ಗೆ ಇದೇ ಮುಖ್ಯಮಂತ್ರಿಗೆ ಮನವಿ ಮಾಡಿದಾಗ ಅವರಿಗೆ ಕೈಕೊಟ್ಟು ಈ ದರೋಡೆಕೋರರ ಕೈಗೆ ಕಸ ಸಂಗ್ರಹಿಸುವ ಕೆಲಸ ಕೊಟ್ಟು ಬೆಂಗಳೂರಿನಲ್ಲಿ ಮತ್ತೊಂದು ದರೋಡೆಕೋರರ ಹುಟ್ಟಿಗೆ ಕಾರಣರಾದರು.
  2. ಬೆಂಗಳೂರಿನ ಟ್ರಾಫಿಕ್ ಪೋಲಿಸರು ಮತ್ತೊಂದು ರೀತಿಯ ಹಗಲು ದರೋಡೆ. ಸುಮ್ಮನೆ ಸಿಗ್ನಲ್ ಜಂಪ್, ಅದು ಇದು ಒನ್ ವೇ ಎಂದು ಪ್ರತೀ ದಿನಾ ಜನರ ದರೋಡೆ ಮಾಡುವುದೇ ಇವರ ಕಾಯಕವಾಗಿದೆ.
  3. ಪ್ರತೀ ತಿಂಗಳೂ ಮನೆಗೆ ಒಬ್ಬ ಗೂರ್ಖಾ ಬರುತ್ತಾನೆ. ಕೈಯಲ್ಲಿ ಪ್ರತೀ ಮನೆಯಿಂದ ಸಂಗ್ರಹಿಸಿದ ಹತ್ತು, ಇಪ್ಪತ್ತರ ನೋಟು ತೋರಿಸುತ್ತಾ..."ಸಾಬ್! ಮಾಮೂಲಿ ದೇದೋ...." ಎಂದು ಅರಚುತ್ತಾನೆ. ಇಲ್ಲ ಎಂದರೆ ಗೊಣಗುತ್ತಾ ಹೋಗುತ್ತಾನೆ.
  4. ಇನ್ನು ಟ್ರಾಫಿಕ್ ಸಿಗ್ನಲ್ ಬಂದರೆ ಈ ಶಿಖಂಡಿ( ಖೋಜಾ)ಗಳ ಕಾಟ. ಕೆಂಪು ಸಿಗ್ನಲ್ ಬರುವುದನ್ನೇ ಕಾಯುತ್ತಿರುವ ಇವರು ಕೂಡಲೇ ದ್ವಿಚಕ್ರ ವಾಹನದವರ ದರೋಡೆಗಿಳಿಯುತ್ತಾರೆ. ಕೊಡದಿದ್ದಲ್ಲಿ, ಮುಖಕ್ಕೆ ಉಗುಳುವುದು, ಶಾಪ ಹಾಕುವುದು, ಕೆಟ್ಟ ಪದ ಉಪಯೋಗಿಸುವುದು...ಮಾಡಿ ಹಣ ಕೀಳುತ್ತಾರೆ.
  5. ರೇಶನ್ ಅಂಗಡಿಗೆ ಹೋದರೆ ಎಲ್ಲ ಮಿಕ್ಸಿಂಗ್....ಅಕ್ಕಿಯಲ್ಲಿ ಕಲ್ಲು, ತೂಕದಲ್ಲಿ ಮೋಸ, ಬಾಯಿಗೆ ಬಂದ ಬೆಲೆ ಹೇಳಿ ನಮ್ಮನ್ನು ಹಗಲು ದರೋಡೆ ಮಾಡುವುದೇ ಇವರ ಕಾಯಕ.

ಇದಷ್ಟೇ ಅಲ್ಲ......ಇನ್ನೆಷ್ಟೋ ಬಿಟ್ಟು ಹೋಗಿವೆ. ಈ ದರೋಡೆಕೋರರಿಂದ ನಮ್ಮನ್ನು...ಮುಖ್ಯವಾಗಿ ಮಧ್ಯಮವರ್ಗದವರನ್ನು ರಕ್ಷಿಸುವವರಾರು?.........ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ, ನಮ್ಮ ಗೋಳು ಕೇಳುವವರಾರು?.

Sunday, May 11, 2008

ಈ ಅಜ್ಜಿಯಂದಿಗಿರುವ ಕಾಳಜಿ ಈಗಿನ ಜನರೇಷನ್ ಗಿಲ್ಲ!!!!


ಬೆಂಗಳೂರು ಮೇ ೧೧ : ಈ ಚಿತ್ರ ನೋಡಿದಿರಾ?. .....ಮೆಚ್ಚಬೇಕು ಇವರ ಕಾಳಜಿಯನ್ನು. ಕನಿಷ್ಠಪಕ್ಷ ಈ ನೂರು ದಾಟಿದ ಅಜ್ಜಿಯಂದಿರಿಗಿರುವ ರಾಜ್ಯದ ಕಾಳಜಿ ನಮ್ಮ ಹೈಟೆಕ್ ಮಂದಿಗಿಲ್ಲದಿರುವುದು ನಮ್ಮ ರಾಜ್ಯದ ದುರ್ದೈವ.
ಐಟಿ ಸಿಟಿ, ಐಟಿ ಹಬ್, ಅತೀ ಹೆಚ್ಚು ಸಾಕ್ಷರ ಮತದಾರರು ಇರುವ ಬೆಂಗಳೂರು ನಗರದಲ್ಲಿ ...ಈ ಐಟಿ ಮಂದಿ( ಹಾಗೂ ವೋಟ್ ಮಾಡದ ಎಲ್ಲರೂ) ತಮ್ಮ ಸಂಕುಚಿತ ಮನಸ್ಸನ್ನು ತೋರ್ಪಡಿಸಿದ್ದಾರೆ. ಅವರಲ್ಲಿ ಅನೇಕ ಜನ ಪಿಕ್ನಿಕ್, ಸಿನೆಮಾ, ಮೋಜು, ಮಸ್ತಿ ಮಾಡಿ ಮತದಾನದ ದಿನವಾದ ಶನಿವಾರವನ್ನು ಕಳೆದಿದ್ದಾರೆ. ಇದು ಇವರು ಈ ದೇಶಕ್ಕೆ ಸಲ್ಲಿಸುವ ಮಹಾ ಸೇವೆ. ನಡೆಯಲಾಗದಿದ್ದರೂ ಇತರರ ಸಹಾಯದಿಂದ ನಡೆದು ಬಂದು ನೂರರ ಹೊಸ್ತಿಲಲ್ಲಿರುವ ಕೆಲವು ಅಜ್ಜ,ಅಜ್ಜಿಯಂದಿರು, ನೂರು ದಾಟಿದ ಅಜ್ಜ,ಅಜ್ಜಿಯಂದಿರು ತಮ್ಮ ಅತೀ ಅಮೂಲ್ಯವಾದ ಮತವನ್ನು ಚಲಾಯಿಸಿ ತಮ್ಮ ಒಂದು ಮತದ ಮೌಲ್ಯವನ್ನು ಈ ಜನರಿಗೆ ತೋರಿಸಿದ್ದಾರೆ.
ಏನಾಗಿದೆ ಈ ಜನಕ್ಕೆ?. ಐದು ವರ್ಷಕ್ಕೊಮ್ಮೆ ಬರುವ ಮತದಾನದ ಮೌಲ್ಯ ತಿಳಿಯದಷ್ಟು ಬುದ್ದಿಹೀನರೇ ಈ ಜನ?. ಅಥವಾ ಯಾರು ಬಂದರೂ ಅಷ್ಟೆ...ನಾವು ನಮ್ಮ ಕೆಲಸ ಬಿಡಲಾಗುವುದಿಲ್ಲ ಎಂಬ ದರ್ಪವೇ?......?.
ಚುನಾವಣಾ ಅಯೋಗ ಹಾಗೂ ಭಾರತ ಸರಕಾರ ಸೇರಿ ಒಂದು ಕಾನೂನು ರಚನೆ ಮಾಡುವುದು ಒಳ್ಳೆಯದು. ಈ ಮತದಾನವನ್ನು ಖಡ್ಡಾಯ ಮಾಡಬೇಕು. ಯಾರು ಮತದಾನ ಮಾಡುತ್ತಾರೋ, ಅವರಿಗೆ ಮಾತ್ರ ಎಲ್ಲ ಸರಕಾರಿ ಸೌಲಭ್ಯ ಕೊಡಬೇಕು. ಹಾಗೂ ಮತದಾನ ಮಾಡಿದವ ಮಾತ್ರ ಈ ದೇಶದ ಪ್ರಜೆ ಎಂದು ಘೋಷಿಸಬೇಕು. ಮತದಾನ ಮಾಡದವರ ಎಲ್ಲ ಸೌಲಭ್ಯಗಳನ್ನು ಕಿತ್ತುಕೊಳ್ಳಬೇಕು. ಅಲ್ಲದೆ ಅವರಿಗೆ ಸಜೆ ಅಥವಾ ಅವರಿಗೆ ದಂಡ ವಿಧಿಸಬೇಕು.
ಹೊಡೆದೆಬ್ಬಿಸಿ ಜನರನ್ನು.....ಮತದಾನ ಮಾಡಿ....ನಿಮ್ಮ ಮತ ನಿಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತದೆ. ನಿಮ್ಮ ಮತ ನಿಮ್ಮ ನಾಡಿನ ಜನರ ಏಳಿಗೆಯನ್ನು ನಿರ್ಧರಿಸುತ್ತದೆ. ನಿಮ್ಮ ಮತ ನಿಮಗೆ ಈ ನಾಡಿನ ಬಗ್ಗೆ ಇರುವ ಪ್ರೀತಿಯನ್ನು ತೋರಿಸುತ್ತದೆ. ನಿಮ್ಮ ಮತ ನಿಮ್ಮ ದೇಶಪ್ರೇಮವನ್ನು ತೋರಿಸುತ್ತದೆ.ನೀವು ನಿಜವಾಗಲೂ ಭಾರತವನ್ನು ಪ್ರೀತಿಸುತ್ತೀರಾದರೆ, ನೀವು ದೇಶಪ್ರೇಮಿಯಾದರೆ ತಪ್ಪದೆ ಮತ ನೀಡಿ. ಇಲ್ಲದಿದ್ದರೆ ನೀವು ದೇಶದ್ರೋಹಿಗಳೇ ಸರಿ.......

Saturday, May 10, 2008

ಮಂದ ಬುದ್ದಿಯ ಕರ್ನಾಟಕದ ಮತದಾರ!!!!!!!!!!

ಬೆಂಗಳೂರು ಮೇ ೧೦: ಅರೆರೇ...ನಮ್ಮ ಕರ್ನಾಟಕದ ಮಂದ ಬುದ್ದಿಯ ಮತದಾರರಿಗೆ ಬಹುಪರಾಕ್ ....ಮೊದಲ ಹಂತದ ಮತದಾನ ಮುಗಿದಿದೆ. ಆದರೆ ಕೇವಲ ಶೇಕಡಾ ೫೯ರಷ್ಟು ಮಾತ್ರ ಮತದಾನವಾಗಿದೆ. ಇದು ಖಂಡಿತಾ ತುಂಬಾ ಗಂಭೀರ ವಿಷಯ.
ಪಕ್ಕದ ತಮಿಳುನಾಡು, ಕೇರಳದ ಮಂದಿಗೆ ಇರುವ ಕನಿಷ್ಟ ಜ್ನಾನವೂ ನಮ್ಮ ಕನ್ನಡಿಗರಿಗಿಲ್ಲದಿರುವುದು ನಮ್ಮ ನಾಡಿನ ದೌರ್ಭಾಗ್ಯ. ಇದರಿಂದಲೇ ನಾವು ಕರ್ನಾಟಕದಲ್ಲಿ ಇರುವ ವಿದ್ಯಾವಂತರನ್ನು, ಅಂದರೆ ಕರ್ನಾಟಕದಲ್ಲಿ ವಿದ್ಯಾವಂತರ ಕೊರತೆ ಕಾಣಬಹುದು. ಖಂಡಿತಾ ನಮ್ಮ ರಾಜ್ಯ ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದೆ. ದಕ್ಷಿಣ ಭಾರತದಲ್ಲೇ ಶಿಕ್ಷಣದಲ್ಲಿ ಅತೀ ಹಿಂದುಳಿದಿರುವ ರಾಜ್ಯವಾಗಿದೆ. ಭಾರತ ಸರಕಾರ ಖಂಡಿತಾ ಸರ್ವಶಿಕ್ಷಣ ಅಭಿಯಾನವನ್ನು ಕರ್ನಾಟಕದಲ್ಲಿ ತುಂಬಾ ಕಟ್ಟುನಿಟ್ಟಿನಿಂದ ಜಾರಿಗೊಳಿಸಿ, ಎಲ್ಲರಿಗೂ ಶಿಕ್ಷಣ ಕಡ್ಡಾಯ ಮಾಡಬೇಕಾಗಿದೆ( For mentally metured and Educated who does'nt vote).
ಈ ಬಾರಿ ಕೂಡಾ ಕಿಚಡಿ ಸರಕಾರವೇ ಗತಿ. ಏಕೆಂದರೆ ಕೇವಲ ಶೇಕಡಾ ೮೦ ಮತದಾನವಾದರೆ ಮಾತ್ರ ನಾವು ಒಂದು ಪಕ್ಷದ ಸರಕಾರವನ್ನು ನಿರೀಕ್ಷಿಸಬಹುದು. ಆದರೆ ಈಗ ಮೊದಲ ಹಂತದ ಚುನಾವಣೆ ಮುಗಿದಿರುವುದರಿಂದ ಇನ್ನು ಮತ್ತೆ ರಾಷ್ಟ್ರಪತಿ ಆಡಳಿತದ ಕರಿನೆರಳು ಮತ್ತೆ ನಮ್ಮ ಮೇಲೆ ತೂಗುತ್ತಿದೆ. ಖಂಡಿತಾ ಈ ಬಾರಿ ಕೂಡಾ ಕಿಚಡಿ ಸರಕಾರ ಬರಲಿದೆ. ಇದು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರ...ಮತ್ತೆ ಕಿಚಡಿ...ಮತ್ತೆ ಜಗಳ...ಮತ್ತೆ ಸರಕಾರ ರದ್ದು..ಮತ್ತೆ ಮೈತ್ರಿ...ಮತ್ತೆ ಜಗಳ...ಮತ್ತೆ ರಾಷ್ಟ್ರಪತಿ ಆಡಳಿತ...ಮತ್ತೆ ಮರು ಮೈತ್ರಿ.......ಇದು ನಮ್ಮ ಕರ್ನಾಟಕದ ಗೋಳಾಗಲಿದೆ. ಈ ಬಾರಿ ಮತ್ತೆ ಕಿಚಡಿ ಸರಕಾರ ಬಂದರೆ....ಮತ್ತೆ ಐದು ವರ್ಷ ರಾಷ್ಟ್ರಪತಿ ಆಡಳಿತ ಜಾರಿಗೆ ಬರಬೇಕು. ಇಲ್ಲದಿದ್ದಲ್ಲಿ ಮಿಲಿಟರಿ ಆಡಳಿತವಾದರೂ ಪರವಾಗಿಲ್ಲ. ನಮ್ಮ ಮಂದಬುದ್ದಿಯ ಜನಕ್ಕೆ ಯಾವುದಾದರೆ ಏನಂತೆ?. ಈಗ ಕರ್ನಾಟಕದ ಭವಿಷ್ಯ ಕೇವಲ ಎರಡನೇ ಹಾಗೂ ಮೂರನೇ ಹಂತದ ಚುನಾವಣೆಯ ಮತದಾರನನ್ನು ಅವಲಂಬಿಸಿದೆ. ಅವರೂ ಕೈಕೊಟ್ಟಲ್ಲಿ ಕರ್ನಾಟಕದ ಭವಿಷ್ಯ ಅಧೋಗತಿ......

Thursday, May 08, 2008

ರಾಷ್ತ್ರಪತಿ ಹುದ್ದೆಯ ತಿಪ್ಪರಲಾಗ ಪ್ರಸಂಗ!!!!!!!!!!!!!!!!!!!!!!!!!

ಬೆಂಗಳೂರು ಮೇ ೦೮: ನಮ್ಮ ದೇಶದ ಅತೀ ದೊಡ್ಡ ದುರವಸ್ಥೆ ನಮ್ಮ ದೇಶದ ರಾಷ್ಟ್ರಪತಿ ಎಂಬ ಹುದ್ದೆ. ಕಿಲುಬು ಕಾಸಿನ ಬೆಲೆ ಇಲ್ಲದ ಈ ಹುದ್ದೆ ನಮ್ಮ ದೇಶಕ್ಕೆ ಏಕೆ ಬೇಕು?.

ಇದ್ದಿದ್ದರಲ್ಲಿ ಡಾ.ಕಲಾಂ ಅವಧಿಯಲ್ಲಿ ಮಾತ್ರ ರಾಷ್ಟ್ರಪತಿ ಎಂಬ ಹುದ್ದೆಗೆ ಸ್ವಲ್ಪ ಬೆಲೆ ಬಂದಿತ್ತು. ಅದೇ ಅವರು ಎರಡನೇ ಬಾರಿಗೆ ಚುನಾಯಿತರಾಗಿದ್ದಲ್ಲಿ ಆ ಹುದ್ದೆಯ ಬೆಲೆ ಇಂದು ಈ ಮಟ್ಟಕ್ಕೆ ಬರುತ್ತಿರಲಿಲ್ಲ. ನಿಜವಾಗಿ ಈ ಪ್ರತಿಭಾ ಪಾಟಿಲ್ (ಬಹಳಷ್ಟು ಮಂದಿಗೆ ಇವರು ಯಾರೆಂದು ಗೊತ್ತಿಲ್ಲ??????) ಬಂದ ಮೇಲೆ ಈ ಸ್ಥಾನದ ಬೆಲೆ ಪಾತಾಳಕ್ಕೆ ಇಳಿಯಿತು. ಒಬ್ಬ ಕೆಲಸಕ್ಕೆ ಬಾರದ ಹೆಂಗಸನ್ನು ನಮ್ಮ ದೇಶದ ಪ್ರಥಮ ಮಹಿಳೆ ಎಂದು ಹೇಗೆ ತಾನೆ ನಮ್ಮ ದೇಶಪ್ರೇಮಿಗಳು ಒಪ್ಪಲು ಸಾಧ್ಯ?.

ಭೇಟಿ ನೆಪದಲ್ಲಿ ಸಂಸಾರ ಸಮೇತರಾಗಿ, ಭಾರತದ ಬಡಜನರ ಹಣದಲ್ಲಿ ವಿದೇಶ ಪರ್ಯಟನೆ ಮಾಡುತ್ತಿರುವ ಈ ನಾಲಾಯಕ್ ಮಹಿಳೆಗೆ ಕಿಂಚಿತ್ತಾದರೂ ನಮ್ಮ ದೇಶದ ಬಗ್ಗೆ , ಜನರ ಬಗ್ಗೆ, ಗೌರವದ ಬಗ್ಗೆ ಕಾಳಜಿ ಇದೆಯೇ?. ತನ್ನ ಜತೆ ನಾಲಾಯಕ್ ಗಂಡ ಹಾಗೂ ಮಗನನ್ನೂ ಜೊತೆಗೆ ಕರೆದುಕೊಂಡು ಹೋಗಿ,(ಅವನು ತನ್ನ ಸ್ವಂತ ಕೆಲಸಕ್ಕಾಗಿ ಸರಕಾರದ ಹಣದಲ್ಲಿ ಹೋಗಿದ್ದ) ದೇಶದ ಖಜಾನೆಯನ್ನು ಖಾಲಿ ಮಾಡುವ ಆಲೋಚನೆಯಲ್ಲಿದ್ದಾಳೆ ಈ ಮಹಿಳೆ.

ಇಂತಹ ಜನರ ವಿರುದ್ದ ಸುಪ್ರೀಂಕೋರ್ಟ್ ಯಾಕೆ ಗಪ್-ಚಿಪ್ ಆಗಿದೆ?......ಮೊದಲೇ ಭ್ರಷ್ಟಾಚಾರಿ ಮಹಿಳೆ.......ಯಾವುದೋ ಆಶ್ರಮ ಕಟ್ಟಲೆಂದು ಜನರಿಂದ ಸಂಗ್ರಹಿಸಿದ ಹಣವನ್ನು ತನ್ನ ಸ್ವಂತ ಕೆಲಸಕ್ಕೆ ಬಳಸಿರುವ ಈ ಮಹಿಳೆಗೆ ಧಿಕ್ಕಾರವಿರಲಿ. ಇವಳಿಗೆ ಬೆಂಬಲ ನೀಡುತ್ತಿರುವ ರಾಜಕಾರಣಿಗಳಿಗೆ ಧಿಕ್ಕಾರವಿರಲಿ. ಆದಷ್ಟು ಬೇಗ ಈ ಬೇಕಾರ್ ಹುದ್ದೆಯನ್ನು ಇಲ್ಲವಾಗಿಸುವುದು ಸೂಕ್ತ.

Sunday, May 04, 2008

ಪ್ರಾದೇಶಿಕ ಭೀತಿವಾದಿಗಳಿಂದ ರಕ್ಷಿಸಿ

ಬೆಂಗಳೂರು ಮೇ ೪: ಇತ್ತೀಚಿನ ಕೆಲ ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸುತ್ತಿದ್ದರೆ ಭಾರತವು ಇಂದು ಪ್ರಾದೇಶಿಕ ಭೀತಿವಾದವನ್ನು ಎದುರಿಸುತ್ತಿದೆ ಎಂದೆನಿಸುತ್ತದೆ. ಉದಾಹರಣೆಗೆ ಶಿವಸೇನೆಯ ನಾಯಕ ಬಾಳ್ ಠಾಕ್ರೆ ತನ್ನ ಪತ್ರಿಕೆಯ ಮುಖವಾಣಿಯಲ್ಲಿ ಕನ್ನಡಿಗರ ವಿರುದ್ದ ತನ್ನ ಹೇಳಿಕೆ ನೀಡಿದ್ದಾನೆ. ಇದರಿಂದಲೇ ಶಿವಸೇನೆಯ ನಿಜ ಮುಖವಾಡ ಬಯಲಾಗಿದೆ. ಅದು ತನ್ನ ಹಿಂದುತ್ವದ ಕಿಚ್ಚನ್ನು ಕಳೆದುಕೊಂಡು ಈಗ ಪ್ರಾದೇಶಿಕ ಭೀತಿವಾದವನ್ನು ಹುಟ್ಟುಹಾಕುವತ್ತ ತನ್ನ ಹೆಜ್ಜೆ ಇಟ್ಟಿದೆ. ಕನ್ನಡಿಗರು ಇಂದು ಮಹಾರಾಷ್ಟ್ರದಲ್ಲಿ ಹೋಟೆಲ್ ಉದ್ಯಮದಲ್ಲಿ ತಮ್ಮ ಅಧಿಪತ್ಯವನ್ನು ಉಳಿಸಿಕೊಂಡಿದ್ದಾರೆ.
ಮೊದಲು ಶಿವಸೇನೆಯು ಈ ಹೋಟೆಲ್ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಲಾರಂಭಿಸಿದಾಗ, ಮಂಗಳೂರಿನ ಕೆಲ ಹೋಟೆಲ್ ಉದ್ಯಮಿಗಳು ಒಂದಾಗಿ ಪ್ರತಿಭಟಿಸಿದರು. ಆಗ ಶಿವಸೇನೆಯು ಮುಂಬೈನಲ್ಲಿ ಮೊದಲು ರೌಡಿಯಿಸಂ ಶುರು ಮಾಡಿತು. ತನ್ನ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ಹಣವನ್ನು ಈ ತರಹದ ರೌಡಿಯಿಸಂ ನಿಂದ ಪಡೆಯಲಾರಂಭಿಸಿತು. ನಂತರ ಅದಕ್ಕೆ ಪ್ರತಿಯಾಗಿ ಕೆಲ ಮಂಗಳೂರಿನ ಉದ್ಯಮಿಗಳು ಪ್ರತಿ ರೌಡಿಯಿಸಂ ಮಾಡಿದಾಗ ಶಿವಸೇನೆ ಬೆದರಿತು. ಇಲ್ಲಿಂದಲೇ ಮುಂಬೈನಲ್ಲಿ ಮೊದಲು ಭೂಗತ ಲೋಕದ ಹುಟ್ಟಿಗೆ ಶಿವಸೇನೆ ಕಾರಣವಾಯಿತು. ಮತ್ತೆ ತನ್ನ ಪಕ್ಷದ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹಿಂದುತ್ವದ ಮೊರೆ ಹೋಯಿತು. ಈಗ ಅದನ್ನು ಬಿಟ್ಟು ಪ್ರಾದೇಶಿಕ ಭೀತಿವಾದವನ್ನು ಉಂಟುಮಾಡುತ್ತಿದೆ. ಈಗ ಶಿವಸೇನೆಯು ತನ್ನ ನಿಜವಾದ ಬಣ್ಣವನ್ನು ತೋರಿಸುತ್ತಿದೆ. ಅದು ಖಂಡಿತಾ ಭಾರತದ ಸಾರ್ವಭೌಮತೆಯನ್ನು ಬೆಂಬಲಿಸುವುದಿಲ್ಲ. ಅದು ಕೇವಲ ಮರಾಠಿಗರಿಗಾಗಿಯೇ ಇರುವ ಪಕ್ಷ. ತನ್ನ ಸಂಕುಚಿತ ಮನಸ್ಥಿತಿಯಿಂದ ಅದು ಹೊರಬರಲಾಗುತ್ತಿಲ್ಲ. ಈಗ ಪ್ರಾದೇಶಿಕ ಭೀತಿವಾದ ಉಂಟುಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ತನ್ನ ಮಗ ರಾಜ್ ಥಾಕ್ರೆಗೆ ಭಯ ಪಟ್ಟು, ಈ ಥಾಕ್ರೆ ತನ್ನ ಶಿವಸೇನೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಥರ ಹೊಸ ನಾಟಕ ಶುರು ಮಾಡಿದೆ. ಈ ಪ್ರಾದೇಶಿಕ ಭೀತಿವಾದ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾಗಳಲ್ಲಿ ಈಗ ಚಲಾವಣೆಯಲ್ಲಿದೆ. ಇಂತಹ ಭೀತಿವಾದಿಗಳ ವಿರುದ್ದ ಜನ ಒಂದಾಗಿ, ನಮ್ಮ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಂತಾಗಬೇಕು. ಈ ಭಾಳ್ ಥಾಕ್ರೆ, ಕರುಣಾನಿಧಿ, ಜಯಲಲಿತ,ವೈಕೋ, ಚಂದ್ರಬಾಬು ನಾಯ್ಡು ಮುಂತಾದ ಪ್ರಾದೇಶಿಕ ಭೀತಿವಾದಿಗಳ ವಿರುದ್ದ ಭಾರತ ಸರಕಾರ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಇದು ಕರ್ನಾಟಕವಲ್ಲದೆ ಇತರ ಎಲ್ಲಾ ರಾಜ್ಯಗಳಲ್ಲೂ ಹಬ್ಬಿ, ಏಕತೆಗೆ ಭಂಗ ಉಂಟು ಮಾಡುವುದರಲ್ಲಿ ಸಂಶಯವಿಲ್ಲ.

Friday, May 02, 2008

ಕನ್ನಡ ಬ್ಲಾಗಿಸ್ಟ್ ಸಮ್ಮೇಳನ ಮತ್ತೊಮ್ಮೆ ಯಾವಾಗ?

ಬೆಂಗಳೂರು ಮೇ.೨: ಎಲ್ಲ ಕನ್ನಡಿಗರಿಗೂ ನನ್ನ ನಮಸ್ಕಾರ. ಇತ್ತೀಚೆಗೆ ಬೆಂಗಳೂರಿನಲ್ಲಿ ಒಂದು ಬ್ಲಾಗಿಸ್ಟ್ ಸಮ್ಮೇಳನ ನಡೆಯಿತು. ಅದು ತುಂಬಾ ಯಶಸ್ವಿಯಾಗಿ ನಡೆದದ್ದು ಎಲ್ಲ ಬ್ಲಾಗಿಗರಿಗೂ ಸಂತೋಷ ತಂದ ವಿಚಾರ. ಆದರೆ ಅಲ್ಲೇನೋ ಕೊರತೆ ಇತ್ತು ಅನಿಸಿತ್ತು...ಅಲ್ವಾ?. ಎಲ್ಲರೂ ತಮ್ಮ ಕೈಯಿಂದಾದ ಸಹಾಯ ಮಾಡಿ...ಒಂದು ದೊಡ್ಡ ಸಮ್ಮೇಳನವನ್ನೇ ಮಾಡಿದರೆ ಹೇಗೆ?.
ಈ ವಿಚಾರದಲ್ಲಿ ನಾನು ತುಂಬಾ ತಲೆಕೆಡಿಸಿಕೊಂಡು ಈ ಒಂದು ಪ್ರಸ್ತಾಪ ತಮ್ಮ ಮುಂದಿಡುತ್ತಿದ್ದೇನೆ. ಎಲ್ಲಾ ಕನ್ನಡ ಬ್ಲಾಗಿಗರು ಒಂದಾಗಿ ಸೇರಿ, ತಮ್ಮ ಬಲಪ್ರದರ್ಶನ ಮಾಡಿ, ಬ್ಲಾಗ್ ಜಗತ್ತಿನಲ್ಲಿ ಕನ್ನಡಿಗರ ಪ್ರಾಬಲ್ಯವನ್ನು ಎತ್ತಿ ಹಿಡಿದು, ತಾವೇನೂ ಯಾರಿಗೂ ಕಮ್ಮಿ ಇಲ್ಲ ಎಂದು ಇತರರಿಗೆ ತೋರಿಸುವ ಹಾಗೆ...ಹ್ಯಾಗೆ?. ಇದನ್ನು ರಾಷ್ಟ್ರೀಯವಾಗಿ, ಅಂತರರಾಷ್ಟ್ರೀಯವಾಗಿಯೂ ಮಾಡಬಹುದಲ್ಲ?.
ಆದರೆ ಮೊದಲು ರಾಜ್ಯಮಟ್ಟದಲ್ಲಿ ಸಂಘಟಿಸಿ ನಂತರ ಅದು ಯಶಸ್ವಿಯಾದರೆ ಮುಂದುವರಿಯುವುದು ಒಂದು ಉತ್ತಮ ನಡೆಯಾಗಬಲ್ಲುದು.
"ಕೂಡಲೇ ಈ ವಿಚಾರವಾಗಿ ತಾವ್ಯಾರಾದರೂ ಚಿಂತಿಸಿ ಕಮೆಂಟಿಸಿದಲ್ಲಿ ಒಂದು ಪ್ರಯತ್ನ ಮಾಡಬಹುದು"