ಬೆಂಗಳೂರು ಜೂನ್ ೦೮: ಬೆಂಗಳೂರಿನಲ್ಲಿ ಈಗ ಏಕಮುಖ ಸಂಚಾರದ ಭರಾಟೆ ಹೆಚ್ಚಿದೆ. ಎಲ್ಲೆಂದರಲ್ಲಿ ಏಕಮುಖ ಸಂಚಾರ ಮಾಡಿ ಪೋಲೀಸರು ಚೆನ್ನಾಗಿ ಜೋಬಿಗಿಳಿಸುತ್ತಿದ್ದಾರೆ (ಕಳ್ಳ) ಹಣವನ್ನು. ಪೋಲಿಸರೇ ಚಾಲು ಎಂದರೆ, ಅವರಿಗಿಂತಲೂ ಚಾಲೂ ಆಗಿರುವವರು ಈಗ ಬೆಂಗಳೂರು ತುಂಬಾ ಏಕಮುಖ ಸಂಚಾರವಿದ್ದರೂ ತಮ್ಮ ವಾಹನವನ್ನು ಅಲ್ಲೇ ನುಗ್ಗಿಸುತ್ತಾರೆ.
ಏಕಮುಖ ಸಂಚಾರವಿದ್ದರೂ ಅದು ತಮಗಲ್ಲವೆಂದು ಅಂದುಕೊಳ್ಳುತ್ತಾ, ಹಣದ ಮದವಿರುವ ಈ ಕಳ್ಳಮಂದಿ, ತಮ್ಮ ವಾಹನಗಳನ್ನು ಅಲ್ಲೇ ನುಗ್ಗಿಸುತ್ತಾರೆ. ಪೋಲಿಸಣ್ಣ ಹಿಡಿದರೆ ನೂರೋ ಐವತ್ತೋ ತಳ್ಳಿದರೆ , ಹಲ್ಲುಗಿಂಜಿ, ಸೆಲ್ಯೂಟ್ ಹೊಡೆದು ಮರ್ಯಾದೆಯಿಂದ ಕಳಿಸುತ್ತಾರೆ ಎಂಬ ಭಂಡ ಧೈರ್ಯ ಈ ಗೂಬೆಗಳಿಗೆ (ಅಂದರೆ ಹಗಲು ಕಣ್ಣು ಕಾಣದ).
ಸ್ವಾಮೀ...ನೀವೇನಾದರೂ ಏಕಮುಖ ಸಂಚಾರದ ರಸ್ತೆಯಲ್ಲಿ ಸಂಚರಿಸುತ್ತಿದ್ದೀರೆಂದಿಟ್ಟುಕೊಳ್ಳಿ, ಆದರೂ ನೀವು ತುಂಬಾ ಜಾಗ್ರತೆಯಲ್ಲಿರಬೇಕು, ಎದುರಿಗೆ ಬರುವ ಕೆಲವು ವಾಹನಗಳು, ಹೈವೇನಲ್ಲಿ ಓಡಿಸುವುದಕ್ಕಿಂತ ಜೋರಾಗಿ ಬರುತ್ತಿರುತ್ತವೆ. ಆದರೆ ಅವರಿಗೆ ಇದು ಏಕಮುಖ ಸಂಚಾರ ಎಂಬ ಪರಿವೇ ಇರುವುದಿಲ್ಲ. ಬೆಂಗಳೂರಿನಲ್ಲಿ ಈ ಗೂಬೆಗಳ ಸಂತತಿ ದಿನೇ ದಿನೇ ಜಾಸ್ತಿಯಾಗುತ್ತಿರುವುದು ಕಳವಳದ ಸಂಗತಿ. ಆದರೂ ಬೆರಳೆಣಿಕೆಯ ಪೋಲಿಸರೂ ಅವರನ್ನು ಪ್ರಶ್ನಿಸುವ ಗೋಜಿಗೇ ಹೋಗದಿರುವುದು ಅನುಮಾನಕ್ಕಾಸ್ಪದ ಉಂಟುಮಾಡಿದೆ. ಈ ಗೂಬೆಗಳನ್ನು ಹಿಡಿದರೆ, ಕನಿಷ್ಟ ಪಕ್ಷ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬಹುದು.
ಉದಾಹರಣೆಗೆ ಮೈಸೂರು ರಸ್ತೆಯಿಂದ ಹೊಸಕೆರೆಹಳ್ಳಿಗೆ ಹೋಗುವ ರಸ್ತೆಯಲ್ಲಿ(ಬಾಪೂಜಿನಗರದಿಂದ) ದಿನಾ ಈ ಗೋಳು ಕಾಣಸಿಗುತ್ತದೆ. ಒಬ್ಬ ಒಂದು ಸಾರಿ ನನ್ನ ಬೈಕಿಗೇ ಗುದ್ದಿದ್ದ. ಗುದ್ದಿಯೂ ನಿಲ್ಲಿಸದೆ ಓಡಿ ಹೋಗಿದ್ದ. ಏಕಮುಖಸಂಚಾರವಾದರೂ ಅವರು ವಾಹನ ಓಡಿಸುವ ವೇಗ ನೋಡಿದರೆ ನಮಗೇ ಅನುಮಾನವಾಗುತ್ತದೆ, ಇದು ಏಕಮುಖಸಂಚಾರ ರಸ್ತೆಯೋ, ದ್ವಿಮುಖವೋ ಅಂತ. ಇಂತಹ ಮೂರನೇವರ್ಗದ ಮಂದಿ ಮೇಲೆ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.
Subscribe to:
Post Comments (Atom)
No comments:
Post a Comment