Monday, November 24, 2008
"ಅಭಿನಂದನ...ಹೀಗೊಂದು ಪುರಸ್ಕಾರ ವೇದಿಕೆ"
ಬೆಂಗಳೂರು ನವೆಂಬರ್ ೨೪:ನವೆಂಬರ್ ೨೩ನೇ ತಾರೀಖು ಸಾಯಂಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭರ್ಜರಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ ಇತ್ತ NMKRV ಸಭಾಂಗಣದಲ್ಲಿ ರಾಘವೇಂದ್ರ ಕಾಂಚನ್ರ ನಿರೂಪಣೆಯಲ್ಲಿ ಸಂಗೀತ ಸುಧೆಯೇ ಹರಿಯುತ್ತಿತ್ತು. ಅತ್ತ ಭಾರತ ತಂಡದಿಂದ ರನ್ಗಳ ಸುರಿಮಳೆಯಾಗುತ್ತಿದ್ದರೆ ಇತ್ತಾ ಸಭಾಂಗಣದಲ್ಲಿ ಅಭಿನಂದನ ತಂಡದಿಂದ ಜಿಟಿಜಿಟಿ ಮಳೆಯ ನಡುವೆ ಸಂಗೀತದ ಸುಧೆಯ ಸುರಿಮಳೆ.
ಹೌದು...ಅಂದು ಅಭಿನಂದನ ಬಳಗದ "ರಂಗೋಲಿ" (ಸುಶ್ರಾವ್ಯ ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ), ರಂಗು ರಂಗಾಗಿ ಮೂಡಿಬಂದಿದ್ದು ಸೇರಿದ ಸಕಲ ಕನ್ನಡ ಕಲಾ ರಸಿಕರ ಕಣ್ಮನ ತಣಿಸುವಲ್ಲಿ ಸಫಲವಾಯಿತು. ಈ ಕಾರ್ಯಕ್ರಮದ ಹೆಸರೇ "ಅಭಿನಂದನ...ಹೀಗೊಂದು ಪುರಸ್ಕಾರ ವೇದಿಕೆ" ಹೇಳುವಂತೆ ಇದೊಂದು ಉದಯೋನ್ಮುಖ ಗಾಯಕರು, ಕಲಾವಿದರುಗಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಜನಮನಕ್ಕೆ ಪರಿಚಯಿಸುವ ಒಂದು ಯುವ ವೇದಿಕೆ. ಶ್ರೀ ವಾಸುದೇವ ಅಡಿಗರಿಂದ ಉದ್ಘಾಟನೆಗೊಂಡು ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದದ್ದು ರಾಘವೇಂದ ಕಾಂಚನ್ರ ನಿರೂಪಣೆ. ಚಿತ್ರ ನಿರ್ಮಾಪಕರಾದ ಬಾ.ಮ.ಹರೀಶ್, ಶ್ರೀನಿವಾಸ ರಾಯರು, ಕಬಡ್ಡಿ ವೆಂಕಟೇಶ್, ಚಿತ್ರ ನಿರ್ದೇಶಕರಾದ ನರೇಂದ್ರಬಾಬು, ಉದಯೋನ್ಮುಖ ಚಿತ್ರ ನಿರ್ದೇಶಕ ಅನೂಪ್, ಖ್ಯಾತ ಸಂಗೀತ ನಿರ್ದೇಶಕ ರಾಜನ್ ಹಾಗೂ ಉದಯ ಶೆಟ್ಟಿಯವರನ್ನು ಆತ್ಮೀಯವಾಗಿ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.
ಎಲ್ಲ ಗಣ್ಯರನ್ನೂ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಗಾಯಕರಾದ ಸರ್ವಶ್ರೀ ಬದರಿಪ್ರಸಾದ್, ಅರವಿಂದ್, ದೀಕ್ಷಿತ್, ಮಾಸ್ಟರ್ ಧನುಷ್, ಶ್ರೀಮತಿ ಕುಶಲ ಮೊದಲಾದವರ ಸಿರಿಕಂಠದಲ್ಲಿ ಹಳೆಯ ಶ್ರೀಮಂತ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳು ಸುಶ್ರಾವ್ಯವಾಗಿ ಮೂಡಿಬಂದಿತ್ತು. ಹಳೆಯ ಕನ್ನಡ ಗೀತೆಗಳಾದ "ಮಾಮರವೆಲ್ಲೋ, ಕೋಗಿಲೆಯೆಲ್ಲೋ", "ಎಲ್ಲಿರುವೇ...ಮನವ ಕಾಡುವ ರೂಪಸಿಯೇ" ಮುಂತಾದ ಕನ್ನಡ ಗೀತೆಗಳು, "ಜಾನೇ ಕಹಾಂ ಗಯೇ ವೊ ದಿನ್", "ಜವಾನೀ ದಿವಾನಿ" ಮುಂತಾದ ಹಿಂದಿ ಹಾಡುಗಳು ನೆರೆದ ಎಲ್ಲರ ಮನಸೂರೆಗೊಂಡು ಮನತಣಿಸಿತು.
ಅಂದ ಹಾಗೆ ನಾನು ಈ ರಸಸಂಜೆಗೆ ಅಹ್ವಾನಿತನಾದದ್ದು ಒಂದು ಆಕಸ್ಮಿಕ. ಅಂದು ಭಾನುವಾರ ನಮ್ಮ ಸಂಬಂಧಿಕರ ನಿಶ್ಚಿತಾರ್ಥಕ್ಕೆ ಹೋಗಿದ್ದೆ, ಅಲ್ಲಿ ಆಕಸ್ಮಿಕವಾಗಿ ಸಿಕ್ಕಿದವರು ಶ್ರೀ ಕೆ.ಎನ್.ಅಡಿಗರು, ಹೀಗೆ ಮಾತನಾಡುತ್ತಾ ಅವರು "ಇವತ್ತು ಸಂಜೆ ಫ್ರೀ ಆಗಿದ್ದರೆ ಒಂದು ಕಾರ್ಯಕ್ರಮಕ್ಕೆ ಬನ್ನಿ" ಎಂದು ಅದರ ವಿವರ ನೀಡಿದರು. ನಾನೂ ನೋಡೋಣ ಎಂದು ಜಿಟಿಜಿಟಿ ಮಳೆಯನಡುವೆ, ಕ್ರಿಕೆಟ್ ಹುಚ್ಚನ್ನು ಮರೆತು ಆ ಒಂದು ಕಾರ್ಯಕ್ರಮದ ಒಬ್ಬ ಪ್ರೇಕ್ಷಕನಾಗಿ ಹೋಗಿದ್ದೆ. ಅಲ್ಲಿ ಹೋದ ಮೇಲೆ ಇನ್ನೂ ಇಂತಹ ರಸಸಂಜೆಗಳಲ್ಲಿ ಭಾಗವಹಿಸುವ ಒಂದು ಅವಕಾಶ ಮಾತ್ರ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ನನಗೆ ನಾನೇ ಪ್ರತಿಜ್ಞೆ ಮಾಡಿಕೊಂಡಿದ್ದೇನೆ......ಅಡಿಗರೇ...ಮತ್ತೊಮ್ಮೆ ಥ್ಯಾಂಕ್ಸ್...ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ.
Subscribe to:
Post Comments (Atom)
3 comments:
ಇಂತಹ ಕಾರ್ಯಕ್ರಮಗಳಿಗೆ ದಯವಿಟ್ಟು ಪ್ರೋತ್ಸಾಹ ನೀಡುವತ್ತ ಎಲ್ಲ ಕನ್ನಡಿಗರೂ ಶ್ರಮಿಸಬೇಕು.
ನನಗೂ ಒಂದು ಫ್ರೀ ಟಿಕೆಟ್ಟಿರಲಿ... ಅದರ ಜೊತೆಗೇ ಒಂದಷ್ಟು ಫ್ರೀ ಟೈಮನ್ನೂ ಕಟ್ಟಿ ಕಳುಹಿಸಿ...
ಒಳ್ಳೆಯ ರಿಪೋರ್ಟ್...
ಅನ್ವೇಷಿಗಳೇ, ಫ್ರೀ ಮಾಡಿಕೊಂಡು ಬನ್ನಿ....ನಿಮ್ಮ (ನೀವಿರುವ) ಊರಲ್ಲಿ ಕೂಡಾ ಕನ್ನಡದ ಕಂಪನ್ನು ಹರಡುವ ಬಗ್ಗೆ ನಾವೆಲ್ಲಾ ಒಂದು ಪ್ರಯತ್ನ ಮಾಡಲೇಬೇಕು. ತಮಿಳುನಾಡಿನಲ್ಲೂ ಕನ್ನಡದ ಕಂಪು ಪಸರಿಸಿ, ಅಲ್ಲೂ ಕನ್ನಡ ಪತ್ರಿಕೆಗಳು, ಚಿತ್ರಗಳು ಬರುವ ಹಾಗೆ ಮಾಡಬೇಕಾಗಿದೆ.
Post a Comment