Showing posts with label ನಮ್ಮ ಕರ್ನಾಟಕ. Show all posts
Showing posts with label ನಮ್ಮ ಕರ್ನಾಟಕ. Show all posts

Sunday, October 31, 2010

ಪ್ರಾರ್ಥನಾ ಶಾಲೆ ಮತ್ತು ಟ್ರಾಫಿಕ್ ಕಿರಿಕ್ಕು






ಬೆಂಗಳೂರಿನ ಪದ್ಮನಾಭನಗರದ ಹತ್ತಿರ ಇರುವ ಪ್ರಾರ್ಥನಾ ಶಾಲೆಯಿಂದ ಸಾರ್ವಜನಿಕರಿಗೆ ಆ ರಸ್ತೆಯಲ್ಲಿ ಓಡಾಡಲೂ ಆಗದ ದುಸ್ತರ ಪರಿಸ್ಥಿತಿ ಎದುರಾಗಿದೆ. ಆ ಶಾಲೆಗೆ ಬರುವ ಪ್ರತೀ ಒಬ್ಬ ಮಗುವಿಗೆ ಒಂದು ಕಾರು ಆ ರಸ್ತೆಯಲ್ಲಿ ಓಡಾಡುವುದರಿಂದ ದಿನ ನಿತ್ಯ ಅಲ್ಲಿ ಸಾರ್ವಜನಿಕ ವಾಹನಗಳು, ದ್ವಿಚಕ್ರ ವಾಹನಗಳು ಓಡಾಡಲು ಅಲ್ಲದೆ ನಡೆದುಕೊಂಡು ಹೋಗಲೂ ಸಹ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ಸಂಚಾರಿ ಪೋಲಿಸರಿಗೂ ದಿನ ನಿತ್ಯ ಕಿರಿಕಿರಿ. ಅಲ್ಲದೆ ಉತ್ತರಹಳ್ಳಿಯಿಂದ ಕುಮಾರಸ್ವಾಮಿ ಬಡಾವಣೆಗೆ ಹೋಗಲು ಬಲಕ್ಕೆ ತಿರುಗುವ ಅವಕಾಶವಿಲ್ಲ. ಅದರೆ ಈ ಸಂಚಾರಿ ನಾಮಫಲಕದ ಮುಂಭಾಗವೇ ರಾಜಕೀಯ ಪಕ್ಷದ ಬ್ಯಾನರ್ ರಾರಾಜಿಸುತ್ತಿದೆ. ಇದರಿಂದ ಈ ನಾಮಫಲಕ ಕಾಣಿಸದಿರುವುದರಿಂದ ಅನೇಕರು ಬಲಕ್ಕೆ ತಿರುಗಿಸಲು ಹೋಗಿ, ಸುಮ್ಮನೇ ದಂಡ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಆ ಶಾಲೆಯ ಮಕ್ಕಳೂ ಕೂಡಾ ತಾವು ಅಭದ್ರತೆಯಿಂದ ಓಡಾಡುವಂತಾಗಿದೆ. ಇಲ್ಲಿ ಓಡಾಡುವ ವಾಹನಗಳಿಂದ ರಸ್ತೆ ದಾಟಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ದಾರಿಹೋಕರಿಗೆ ಹಾಗೂ ಸಾರ್ವಜನಿಕ ವಾಹನಗಳಿಗೆ ಒಡಾಡಲು ದುಸ್ತರವಾಗುವಂತೆ ಮಾಡಿದ ಈ ಪ್ರಾರ್ಥನಾ ಶಾಲೆಯನ್ನು ಆ ಜಾಗದಿಂದ ಎತ್ತಂಗಡಿ ಮಾಡಿಸದಿದ್ದರೆ ಮುಂದೆ ಆ ರಸ್ತೆಯಲ್ಲಿ ಖಂಡಿತಾ ಓಡಾಡಲು ಸಾದ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ದಯವಿಟ್ಟು ಅಲ್ಲಿನ ಜನನಾಯಕರು ಸಾರ್ವಜನಿಕ ಹಿತಾಸಕ್ತಿ ಕಾಯಿದೆಯ ಅನುಸಾರ ಆ ಶಾಲೆಯ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಬೇಕಾಗಿದೆ.

Thursday, June 10, 2010

ನಗರ ಪಾಲಿಕೆ ಮತ್ತು ಕಾರ್ಯ ದಕ್ಷತೆ




ನೀವು ಮೇಲೆ ನೋಡುತ್ತಿರುವುದು ಬೆಂಗಳೂರಿನ ಬಿನ್ನಿ ಮಿಲ್ ರಸ್ತೆಯಲ್ಲಿ ದಿನಾಂಕ ೦೮-೦೬-೨೦೧೦ರಂದು ಬೆಳಿಗ್ಗೆ ನಾನು ಕಂಡ ಹೃದಯ ವಿದ್ರಾವಕ ದೃಶ್ಯ. ದನವೊಂದು ಅಪಘಾತಕ್ಕೆ ಈಡಾಗಿ ಸತ್ತು ಬಿದ್ದಿದೆ. ಅದನ್ನು ಎರಡು ದಿನವಾದರೂ ಸಂಬಂಧ ಪಟ್ಟವರು ತೆಗೆದಿಲ್ಲ. ಅದೇ ದಾರಿಯಲ್ಲಿ ಓಡಾಡುವ ಸರಕಾರಿ ವಾಹನಗಳು, ಪೋಲೀಸರು ಕೂಡಾ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಆ ದನ ಕೊಳೆತು ನಾರುತ್ತಿದೆ. ನಾಯಿ, ಕಾಗೆಗಳು ಅದರ ಮಾಂಸವನ್ನು ಕಚ್ಚಿ ಕಚ್ಚಿ ಎಳೆದು ತಿನ್ನುತ್ತಿವೆ. ಕೆಲ ಸಮಯದ ನಂತರ ಆ ನಾಯಿಗಳಿಗೆ ಹುಚ್ಚು ಹಿಡಿಯುವ ಸಾಧ್ಯತೆಯೂ ಇಲ್ಲದಿಲ್ಲ. ಆ ನಾಯಿಗಳು ದಾರಿಹೋಕರಿಗೆ ಕಚ್ಚದೇ ಇಅರಲು ಸಾಧ್ಯವೇ ಇಲ್ಲ. ಈ ದನ ಸತ್ತು ಇವತ್ತಿಗೆ ಮೂರು ದಿನ ಆದರೂ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂದರೆ ನಮ್ಮ ದರಿದ್ರ ಕರ್ನಾಟಕ ಸರಕಾರ, ದರಿದ್ರ ಬಿ.ಬಿ.ಎಂ.ಪಿ.ಗಳು ನಿದ್ದೆ ಮಾಡುತ್ತಿವೆಯೇ?. ಇದನ್ನು ನಾನು ಸಮೀಪದಲ್ಲೇ ಇದ್ದ ಪೋಲೀಸರಿಗೆ ತಿಳಿಸಿದರೂ ಅವರು ಅಸಡ್ಡೆ ಮಾಡಿರುತ್ತಾರೆ.
"ರೀ...ಅದು ನಮ್ಮೆ ಕೆಲಸ ಅಲ್ಲ. ಕಾರ್ಪೋರೇಶನ್ ಅಫೀಸಿಗೆ ಫೋನ್ ಮಾಡಿ ಹೇಳಿ. ಆ ಬೋಳೀ ಮಕ್ಳೇ ಇಲ್ಲಿ ತಂದು ಹಾಕಿರುತ್ತಾರೆ." ಎಂಬ ಮಾತು ಹೇಳಿದರು. ಅವರ ನಂಬರ್ ಕೊಡಿ ಎಂದರೆ...."ನಮಗೆ ಗೊತ್ತಿಲ್ಲ" ಎಂಬ ಹಾರಿಕೆಯ ಉತ್ತರ ಬೇರೆ.

ಇವತ್ತು ಸರಕಾರದ ಕಾರ್ಯ ದಕ್ಷತೆ ಸತ್ತು ಹೋಗಿದೆ. ದುಡ್ಡು ಕೊಡದೆ ಯಾವ ಕೆಲಸವೂ ಆಗುವುದಿಲ್ಲ. ಆದರೆ ಇಂತಹ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಕ್ಕೂ ಇದು ಅನ್ವಯವಾದರೆ, ಈ ಸರಕಾರ ಇದ್ದೂ ಸತ್ತಂತೆ. ಒಬ್ಬ ಅಪ್ರಯೋಜಕ ಮುಖ್ಯಮಂತ್ರಿ, ಭ್ರಷ್ಟ ಮಂತ್ರಿಗಳನ್ನು ಒಳಗೊಂಡಿರುವ ಈ ಸರಕಾರ ಸಾರ್ವಜನಿಕರ ಬಗ್ಗೆ ಇನ್ನೆಷ್ಟು ಕಾಳಜಿ ತೋರಿಸಬಹುದು?.

Sunday, January 18, 2009

ಕರ್ನಾಟಕ ರಕ್ಷಣಾ ವೇದಿಕೆಯ ವಿಶ್ವ ಕನ್ನಡ ಜಾಗೃತಿ ಸಮ್ಮೇಳನ


ಸಮ್ಮೇಳನದ ದ್ವಾರದಲ್ಲಿ ನೆರೆದ ಬೃಹತ್ ಜನಸ್ತೋಮ

ಸಮ್ಮೇಳನದ ಅದ್ದೂರೀ ವೇದಿಕೆ

ಕನ್ನಡಿಗರ ಉತ್ಸಾಹ

ಬ್ಯಾಂಡ್ ಬಾಜಾ

ಸಮ್ಮೇಳನದಲ್ಲಿ ಕಿಕ್ಕಿರಿದ ಜನಸ್ತೋಮ

ಕನ್ನಡಿಗರಿಗೆ ಎಚ್ಚರ ಹೇಳುವ ಫಲಕಗಳು

ಮತ್ತೊಂದು ಎಚ್ಚರ

ಊಟದ ಸಮಯ

ಅದ್ದೂರಿ ದ್ವಾರ

ದ್ವಾರದ ಮುಂದೆ ಜನಸ್ತೋಮ

ಊಟದ ತಯಾರಿ

ಬೆಂಗಳೂರು ಜನವರಿ ೧೮: ಕಣ್ತುಂಬಾ ಕನ್ನಡ ಬಾವುಟಗಳು, ಎಲ್ಲಾ ಮಂದಿಯ ಹೆಗಲ ಮೇಲೆ ಕನ್ನಡದ ಶಾಲುಗಳು, ಕಿವಿ ತುಂಬಾ ಕನ್ನಡ ಡಿಂಡಿಮ, ಉಸಿರೆಲ್ಲಾ ಕನ್ನಡತನ, ಬಾಯ್ತುಂಬಾ ಆತಿಥ್ಯದ ಸವಿ...ಎಲ್ಲೆಲ್ಲೂ ಹಬ್ಬದ ಸಡಗರ..ಇದು ಕನ್ನಡ ರಕ್ಷಣಾ ವೇದಿಕೆಯವರು ಆಯೋಜಿಸಿದ್ದ ವಿಶ್ವ ಕನ್ನಡ ಜಾಗೃತಿ ಸಮ್ಮೇಳನದ ವೈಶಿಷ್ಟ್ಯ ಎಂದರೆ ತಪ್ಪಾಗಲಾರದು. ಭೇಷ್...ನಾರಾಯಣ ಗೌಡ್ರೇ...

ಈ ಬಹುರಾಷ್ಟ್ರೀಯ ದಾಳಿಯಿಂದ ಇಂದು ಕನ್ನಡತನವನ್ನು ಜನ ಮರೆಯುತ್ತಿರುವ ಒಂದು ದಾರಿದ್ರ್ಯದ ಕಾಲದಲ್ಲಿ ಕನ್ನಡಿಗರ ಪಾಲಿಗೆ ಅಮೃತ ಸಿಂಚನದಂತೆ ಈ ಸಮ್ಮೇಳನ ಮೂಡಿ ಬಂದಿತು. ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ಈ ಸಮ್ಮೇಳನದ ಮುಖ್ಯ ದ್ವಾರವನ್ನು ಹಬ್ಬದ ಸಂಭ್ರಮವನ್ನು ಆಚರಿಸುವಂತೆ ಸಿಂಗರಿಸಲಾಗಿತ್ತು. ಮುಖ್ಯ ದ್ವಾರ ದಾಟುತ್ತಿದ್ದಂತೆ ದೂರದೂರಿನಿಂದ ಬಂದಿದ್ದ ಹಾಗೂ ಸಮ್ಮೇಳನಕ್ಕೆ ಬಂದಿದ್ದ ಎಲ್ಲರಿಗೂ ಬಿಸಿಬಿಸಿ ಊಟದ ತಯಾರಿ ನಡೆದಿತ್ತು.

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬುದಾಗಿ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಸರ್ವ ಧರ್ಮ ಸಮನ್ವಯ ನೀತಿಯನ್ನು ತನ್ನ ಸಂಘಟನೆಯ ಮೂಲಕ ಜಗತ್ತಿಗೆ ಸಾರಿ ಸಾರಿ ಹೇಳಿದೆ."ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ" ಎಂಬ ಘೋಷವಾಕ್ಯದೊಂದಿಗೆ ಕಳೆದ ಬಾರಿ ಭರ್ಜರಿಯಾಗಿ ಹಬ್ಬ ಆಚರಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ, ಈ ಬಾರಿ "ಕರ್ನಾಟಕದಿಂದ ಭಾರತ" ಎಂಬ ಘೋಷವಾಕ್ಯ ತನ್ನದಾಗಿಸಿದೆ. ಅಲ್ಲಲ್ಲಿ ಕನ್ನಡದ ಬಗ್ಗೆ ಘೋಷವಾಕ್ಯಗಳನ್ನು ಪ್ರದರ್ಶಿಸಲಾಗಿತ್ತು. ಹಸಿದ ಹೊಟ್ಟೆಗೆ ಭರ್ಜರಿ ಊಟ, ಬವಳಿದ ಕನ್ನಡಿಗನಿಗೆ ಅಮೃತ ಸಿಂಚನವನ್ನು ಈ ಸಮ್ಮೇಳನ ನೀಡಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಉದ್ಯಮಿ ಮೋಹನ್ ಆಳ್ವ ಹಾಗೂ ಪತ್ರಿಕಾ ರಂಗದ ಶ್ರೀ ಸತ್ಯನಾರಾಯಣ ಮೊದಲಾದವರು ಈ ಸಮ್ಮೇಳನದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಅವುಗಳಿಂದ ರಾಜ್ಯಕ್ಕಾಗುವ ನಷ್ಟ ಲಾಭಗಳ ಬಗ್ಗೆ ಮಾತುಗಳನ್ನಾಡಿದರು.

ಒಬ್ಬ ಕನ್ನಡಿಗನಾಗಿ ನನ್ನ ಅನಿಸಿಕೆ ಎಂದರೆ ನಮ್ಮ ಭಾಷಾಭಿಮಾನ ಕಡಿಮೆಯಾಯಿತು, ಅನ್ಯಭಾಷೀಯರಿಗೆ ತೋರುವ ಆದರ ಅತಿಯಾಯಿತು. ಈಗಲಾದರೂ ಎಚ್ಚೆತ್ತುಕೊಳ್ಳಿ ಕನ್ನಡಿಗರೇ...ಇಲ್ಲದಿದ್ದಲ್ಲಿ ನಾವು ಮಾದುವ ತಪ್ಪಿಗೆ ನಾಳೆ ನಮ್ಮ ಮಕ್ಕಳು, ಮೊಮ್ಮಕ್ಕಳು ಫಲ ಅನುಭವಿಸಬೇಕಾದೀತು.

Sunday, January 11, 2009

ಜನಪದ ಜಾತ್ರೆ ಮತ್ತು ನಗೆ ಹಬ್ಬ






ಬೆಂಗಳೂರು ಜನವರಿ ೧೧: ಮೈನಡುಗುವ ಚಳಿಯಲ್ಲಿ ಭಾನುವಾರ ಸಂಜೆ ಆರು ಗಂಟೆಗೆ ಪರಿವಾರ ಸಮೇತ ಗಿರಿನಗರ ವಿವೇಕಾನಂದ ಪಾರ್ಕ್‌ಗೆ ಹೀಗೇ ಒಂದು ಸವಾರಿ ಹೊರಟಾಗ, ಪಕ್ಕದಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯವರು ಆಯೋಜಿಸಿದ್ದ "ಜನಪದ ಜಾತ್ರೆ ಮತ್ತು ನಗೆ ಹಬ್ಬ ೨೦೦೯" ಕಣ್ಣಿಗೆ ಬಿದ್ದಾಗ ಮನಸ್ಸು ಹಗುರ ಮಾಡಿಕೊಳ್ಳಲು ಅತ್ತ ಧಾವಿಸಿದೆ.

ಕರ್ನಾಟಕದ ಜನಪದ ನೃತ್ಯ ಡೊಳ್ಳುಕುಣಿತದೊಂದಿಗೆ ಆರಂಭವಾದ ಹಬ್ಬ ಮುಂದೆ ಕಂಸಾಳೆ ನೃತ್ಯ, ಚೆನ್ನಪಟ್ಟಣದ ಸಹೋದರಿಯರ "ಹಚ್ಚೇವು ಕನ್ನಡದ ದೀಪ" ಎಂಬ ಹಾಡಿಗೆ ಮಾಡಿದ ನೃತ್ಯ ಮನಸೆಳೆಯಿತು. ವಿ.ವಿ.ಪುರಂ ಕಾಲೇಜಿನ ವಿದ್ಯಾರ್ಥಿಗಳಿಂದ ಮನಮೋಹಕ ಪಟ ನೃತ್ಯ, ಕಂಸಾಳೆ ನೃತ್ಯ, ಜೋಗಿ ಚಿತ್ರದ ಹಾಡಿನ ನೃತ್ಯ, ಕೈಲಾಸಂ ಅವರ "ಕೊ ಕೊ ಕೊ ಕೋಳಿಕೆ ರಂಗ" ಎಂಬ ಹಾಡು....ಅದಾದ ಮೇಲೆ ಮಿಮಿಕ್ರಿ ಪಟು ಮೈಸೂರಿನ ರಮೇಶ್ ಬಾಬು ಅವರ ಕಾಮಿಡಿ ಕೂಡಾ ನಕ್ಕು ನಗಿಸುವಂತೆ ಮಾಡಿತು.

ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು (ಶಿವರಾಮೇ ಗೌಡರು), ಕಾರ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿಯವರು ಕನ್ನಡಿಗರ ಪರವಾಗಿ ಜೋರಾಗಿ ಗುಡುಗಿದರು. ಪರಭಾಷಾ ಅಧಮರಿಗೆ ಎಚ್ಚರಿಕೆಯನ್ನೂ ನೀಡಲಾಯಿತು.ಅಂತೂ ಭಾನುವಾರ ಒಂದು ಉತ್ತಮ ಕಾರ್ಯಕ್ರಮಕ್ಕೆ ಹಾಜರಾತಿ ಹಾಕಿದ್ದಕ್ಕೆ ಮನ ಹಗುರಾಯಿತು.ಇನ್ನೊಂದು ಬಹಳ ಸಂತಸದ ವಿಷಯವೆಂದರೆ ನನ್ನ ಮಗಳು ಪ್ರಥಮ ಬಾರಿಗೆ ಕನ್ನಡ ಸಂಘಟನೆಯೊಂದರ ಕಾರ್ಯಕ್ರಮದ ರಂಗಸ್ಥಳದಲ್ಲಿ ಎರಡು ಹಾಡು ಹಾಡಿದ್ದು. ಅಲ್ಲದೆ ಕನ್ನಡದ ಜನಪದ ನೃತ್ಯಗಳು, ಸಂಸ್ಕೃತಿಯ ಬಗ್ಗೆ ಜನರಿಗೆ ರಕ್ಷಣಾವೇದಿಕೆಯ ಅಧ್ಯ್ಕಕ್ಷರು, ಕಾರ್ಯದರ್ಶಿಗಳು ವಿದ್ಯಾವಂತ ಜನರಿಗೆ "ಬುದ್ದಿ" ಹೇಳಿದರು. Convent ಸಂಸ್ಕೃತಿ ಹೆಚ್ಚುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಒಂದು ಸುಂದರ ಸಂಜೆಯನ್ನು ಕಳೆದ ಅನುಭವ ಮನಕ್ಕೆ ಮುದ ನೀಡಿತು.

Monday, December 22, 2008

ದಕ್ಷಿಣ ಕನ್ನಡಿಗರ ಸಂಘದ ಸುವರ್ಣ ಸಂಭ್ರಮ








ಬೆಂಗಳೂರು ದಶಂಬರ ೨೨ ದಶಂಬರ ಇಪ್ಪತ್ತೊಂದನೇ ದಿನಾಂಕದಂದು ಬೆಂಗಳೂರಿನ ಜಯನಗರದಲ್ಲಿರುವ, ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಪಕ್ಕದಲ್ಲೇ ಇರುವ ಮಂಗಳಾ ಸಭಾಂಗಣದಲ್ಲಿ ದಕ್ಷಿಣ ಕನ್ನಡಿಗರ ಸಂಘದ ಸುವರ್ಣ ಸಂಭ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಸಾವಿರದ ಒಂಭೈನೂರ ಐವತ್ತೊಂಭತ್ತನೇ ಇಸವಿಯಲ್ಲಿ ಪ್ರಾರಂಭವಾದ ಈ ಸಂಘ ಯಶಸ್ವಿಯಾಗಿ ತನ್ನ ಐವತ್ತು ವಸಂತಗಳನ್ನು ಪೂರೈಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಾರಂಭವಾದ ಈ ಸಮಾರಂಭ,ನಂತರ ದಕ್ಷಿಣ ಕನ್ನಡದ ಐವರು ಸಾಧಕರಿಗೆ "ಕರಾವಳಿ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
೧. ಪ್ರೊ. ಯು.ಆರ್. ರಾವ್ ವಿಜ್ಞಾನ ಕ್ಶೇತ್ರ
೨. ಶ್ರೀ ಅನಂತ ಕೃಷ್ಣ ಬ್ಯಾಂಕಿಂಗ್ ಕ್ಷೇತ್ರ
೩. ಶ್ರೀ ಕೈಯಾರ ಕಿಂಞ್‌ಣ್ಣ ರೈ ಗಡಿನಾಡ ಕನ್ನಡಿಗ
೪. ಶ್ರೀ ವಿ.ಮನೋಹರ್ ಸಂಗೀತ ಕ್ಷೇತ್ರ
೫. ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜ್ ಸಾಹಿತ್ಯ ಕ್ಷೇತ್ರ

ರಾಘವೇದ್ರ ಕಾಂಚನ್‌ರ ನಿರೂಪಣೆಯೊಂದಿಗೆ ಪ್ರಾರಂಭವಾದ ಈ ಸಮಾರಂಭ, ನಂತರ ಶ್ರೀ ಕೆ. ಎನ್.ಅಡಿಗರು ಸಂಘದ ಸಿಂಹಾವಲೋಕನ ಮಾಡಿ ಸಂಘದ ಪ್ರಾರಂಭದಿಂದ ಹಿಡಿದು ಈ ವರೆಗಿನ ನಡೆದು ಬಂದ ದಾರಿಯನ್ನು ವಿವರಿಸಿದರು. ಈ ಸಮಾರಂಭದ ರಂಗಸ್ಥಳದಲ್ಲಿನ ಮನೋರಂಜನಾ ಕಾರ್ಯಕ್ರಮಗಳನ್ನು ಶ್ರೀ ವಿ. ಮನೋಹರ್ ಅವರು ಬಹಳ ದಕ್ಷತೆಯಿಂದ ಮಾಡಿದರು. ಪ್ರಾರಂಭದಲ್ಲಿ ಭರತನಾಟ್ಯ ಮತ್ತು ಶ್ರೀಮತಿ ಸುಪ್ರಿಯಾ ಆಚಾರ್ ಅವರು "ಯಾವ ಮೋಹನ ಮುರಳಿ ಕರೆಯಿತೋ" ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಅಲ್ಲದೆ ಶ್ರೀ ಗುರುಕಿರಣ್‌ ಅವರು ಕೂಡಾ ಒಂದು ಘಳಿಗೆ ಬಂದು ರಂಘದಲ್ಲಿ ಎರಡು ಹಾಡು ಹಾಡಿ ರಂಜಿಸಿದರು. ವಿ.ಮನೋಹರ್ ಅವರೂ ಕೂಡಾ ತಾವೇನು ಕಡಿಮೆಯಿಲ್ಲ ಎಂಬಂತೆ ಒಂದು ಹಾಡೂ ಹಾಡಿದರು. ಅಲ್ಲದೆ "ಡೆನ್ನ ಡೆನ್ನ ಡೆನ್ನಾನ" ತುಳು ಹಾಡು ಹಾಗೂ "ಕನ್ನಡವೇ ನಿತ್ಯ...ಕನ್ನಡವೇ ಸತ್ಯ" ಹಾಡಿಗೆ ಮಾಡಿದ ನೃತ್ಯ ಮನಮೋಹಕವಾಗಿತ್ತು.
ಆದರೆ ಇಡೀ ಸಮಾರಂಭದಲ್ಲಿನ ಕಪ್ಪು ಚುಕ್ಕೆ ಎಂದರೆ....ದಕ್ಷಿಣ ಕನ್ನಡದ ತೆಂಕು ತಿಟ್ಟಿನ ಯಕ್ಷಗಾನ ವೇಷಕ್ಕೆ ಬದಲಾಗಿ ಉತ್ತರ ಕನ್ನಡದ ಯಕ್ಷಗಾನ ವೇಷಧಾರಿಗಳನ್ನು ಕುಣಿಸಿ, ಯಕ್ಷಗಾನದ ಬಗ್ಗೆ ಇಲ್ಲಿನ ದಕ್ಷಿಣ ಕನ್ನಡಿಗರಿಗಿರುವ ಅಜ್ಞಾನವನ್ನು ತೋರ್ಪಡಿಸಲಾಯಿತು.

Monday, November 24, 2008

"ಅಭಿನಂದನ...ಹೀಗೊಂದು ಪುರಸ್ಕಾರ ವೇದಿಕೆ"





ಬೆಂಗಳೂರು ನವೆಂಬರ್ ೨೪:ನವೆಂಬರ್ ೨೩ನೇ ತಾರೀಖು ಸಾಯಂಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭರ್ಜರಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ ಇತ್ತ NMKRV ಸಭಾಂಗಣದಲ್ಲಿ ರಾಘವೇಂದ್ರ ಕಾಂಚನ್‌ರ ನಿರೂಪಣೆಯಲ್ಲಿ ಸಂಗೀತ ಸುಧೆಯೇ ಹರಿಯುತ್ತಿತ್ತು. ಅತ್ತ ಭಾರತ ತಂಡದಿಂದ ರನ್‌ಗಳ ಸುರಿಮಳೆಯಾಗುತ್ತಿದ್ದರೆ ಇತ್ತಾ ಸಭಾಂಗಣದಲ್ಲಿ ಅಭಿನಂದನ ತಂಡದಿಂದ ಜಿಟಿಜಿಟಿ ಮಳೆಯ ನಡುವೆ ಸಂಗೀತದ ಸುಧೆಯ ಸುರಿಮಳೆ.
ಹೌದು...ಅಂದು ಅಭಿನಂದನ ಬಳಗದ "ರಂಗೋಲಿ" (ಸುಶ್ರಾವ್ಯ ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ), ರಂಗು ರಂಗಾಗಿ ಮೂಡಿಬಂದಿದ್ದು ಸೇರಿದ ಸಕಲ ಕನ್ನಡ ಕಲಾ ರಸಿಕರ ಕಣ್ಮನ ತಣಿಸುವಲ್ಲಿ ಸಫಲವಾಯಿತು. ಈ ಕಾರ್ಯಕ್ರಮದ ಹೆಸರೇ "ಅಭಿನಂದನ...ಹೀಗೊಂದು ಪುರಸ್ಕಾರ ವೇದಿಕೆ" ಹೇಳುವಂತೆ ಇದೊಂದು ಉದಯೋನ್ಮುಖ ಗಾಯಕರು, ಕಲಾವಿದರುಗಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಜನಮನಕ್ಕೆ ಪರಿಚಯಿಸುವ ಒಂದು ಯುವ ವೇದಿಕೆ. ಶ್ರೀ ವಾಸುದೇವ ಅಡಿಗರಿಂದ ಉದ್ಘಾಟನೆಗೊಂಡು ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದದ್ದು ರಾಘವೇಂದ ಕಾಂಚನ್‌ರ ನಿರೂಪಣೆ. ಚಿತ್ರ ನಿರ್ಮಾಪಕರಾದ ಬಾ.ಮ.ಹರೀಶ್, ಶ್ರೀನಿವಾಸ ರಾಯರು, ಕಬಡ್ಡಿ ವೆಂಕಟೇಶ್, ಚಿತ್ರ ನಿರ್ದೇಶಕರಾದ ನರೇಂದ್ರಬಾಬು, ಉದಯೋನ್ಮುಖ ಚಿತ್ರ ನಿರ್ದೇಶಕ ಅನೂಪ್, ಖ್ಯಾತ ಸಂಗೀತ ನಿರ್ದೇಶಕ ರಾಜನ್ ಹಾಗೂ ಉದಯ ಶೆಟ್ಟಿಯವರನ್ನು ಆತ್ಮೀಯವಾಗಿ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.
ಎಲ್ಲ ಗಣ್ಯರನ್ನೂ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಗಾಯಕರಾದ ಸರ್ವಶ್ರೀ ಬದರಿಪ್ರಸಾದ್, ಅರವಿಂದ್, ದೀಕ್ಷಿತ್, ಮಾಸ್ಟರ್ ಧನುಷ್, ಶ್ರೀಮತಿ ಕುಶಲ ಮೊದಲಾದವರ ಸಿರಿಕಂಠದಲ್ಲಿ ಹಳೆಯ ಶ್ರೀಮಂತ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳು ಸುಶ್ರಾವ್ಯವಾಗಿ ಮೂಡಿಬಂದಿತ್ತು. ಹಳೆಯ ಕನ್ನಡ ಗೀತೆಗಳಾದ "ಮಾಮರವೆಲ್ಲೋ, ಕೋಗಿಲೆಯೆಲ್ಲೋ", "ಎಲ್ಲಿರುವೇ...ಮನವ ಕಾಡುವ ರೂಪಸಿಯೇ" ಮುಂತಾದ ಕನ್ನಡ ಗೀತೆಗಳು, "ಜಾನೇ ಕಹಾಂ ಗಯೇ ವೊ ದಿನ್", "ಜವಾನೀ ದಿವಾನಿ" ಮುಂತಾದ ಹಿಂದಿ ಹಾಡುಗಳು ನೆರೆದ ಎಲ್ಲರ ಮನಸೂರೆಗೊಂಡು ಮನತಣಿಸಿತು.
ಅಂದ ಹಾಗೆ ನಾನು ಈ ರಸಸಂಜೆಗೆ ಅಹ್ವಾನಿತನಾದದ್ದು ಒಂದು ಆಕಸ್ಮಿಕ. ಅಂದು ಭಾನುವಾರ ನಮ್ಮ ಸಂಬಂಧಿಕರ ನಿಶ್ಚಿತಾರ್ಥಕ್ಕೆ ಹೋಗಿದ್ದೆ, ಅಲ್ಲಿ ಆಕಸ್ಮಿಕವಾಗಿ ಸಿಕ್ಕಿದವರು ಶ್ರೀ ಕೆ.ಎನ್.ಅಡಿಗರು, ಹೀಗೆ ಮಾತನಾಡುತ್ತಾ ಅವರು "ಇವತ್ತು ಸಂಜೆ ಫ್ರೀ ಆಗಿದ್ದರೆ ಒಂದು ಕಾರ್ಯಕ್ರಮಕ್ಕೆ ಬನ್ನಿ" ಎಂದು ಅದರ ವಿವರ ನೀಡಿದರು. ನಾನೂ ನೋಡೋಣ ಎಂದು ಜಿಟಿಜಿಟಿ ಮಳೆಯನಡುವೆ, ಕ್ರಿಕೆಟ್ ಹುಚ್ಚನ್ನು ಮರೆತು ಆ ಒಂದು ಕಾರ್ಯಕ್ರಮದ ಒಬ್ಬ ಪ್ರೇಕ್ಷಕನಾಗಿ ಹೋಗಿದ್ದೆ. ಅಲ್ಲಿ ಹೋದ ಮೇಲೆ ಇನ್ನೂ ಇಂತಹ ರಸಸಂಜೆಗಳಲ್ಲಿ ಭಾಗವಹಿಸುವ ಒಂದು ಅವಕಾಶ ಮಾತ್ರ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ನನಗೆ ನಾನೇ ಪ್ರತಿಜ್ಞೆ ಮಾಡಿಕೊಂಡಿದ್ದೇನೆ......ಅಡಿಗರೇ...ಮತ್ತೊಮ್ಮೆ ಥ್ಯಾಂಕ್ಸ್...ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ.

Friday, October 31, 2008

ಕನ್ನಡಿಗರಿಗೆ ಪುಳಕ...ದೇಶದ್ರೋಹಿಗಳಿಗೆ ಮತ್ಸರ

ಬೆಂಗಳೂರು ಅಕ್ಟೋಬರ್ ೩೧: ಇಂದು ನಿಜಕ್ಕೂ ಕನ್ನಡಿಗರಿಗೆ ಅತ್ಯಂತ ಖುಷಿಯ ದಿನ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಸಿಕ್ಕಿದ ದಿನ. ಏಕೆಂದರೆ ಕನ್ನಡಿಗರ ಬಹಳ ದಿನಗಳ ಕನಸು ನನಸಾಗಿದೆ. ಆದರೆ ಅದಕ್ಕಾಗಿ ಇಷ್ಟೊಂದು ಹೋರಾಟ ಮಾಡಬೇಕಾಗಿ ಬಂದದ್ದು ನೋವಿನ ಸಂಗತಿ.
ಕನ್ನಡ ಏನೆ ಕುಣಿದಾಡುವುದೆನ್ನೆದೆ....ಕನ್ನಡ ಎನೆ ಕಿವಿ ನಿಮಿರುವುದು.....ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ----ಈ ತರಹದ ಕವಿ ವಾಣಿಗಳು ಇಂದು ನಿಜವಾಗಿಯೂ ಹೃದಯದ ಒಳಗೆ ಹೊಕ್ಕು, ಒಂದು ತರಹದ ಅವ್ಯಕ್ತ ಆನಂದವನ್ನು ಉಂಟುಮಾಡುತ್ತಿವೆ. ನಿಜವಾಗಿಯೂ ಪ್ರತೀ ಕನ್ನಡಿಗನೂ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸಬೇಕಾಗಿದೆ.
ಆದರೆ ಅದೇ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಕೊಡುವುದರ ವಿರುದ್ಧ ಕೆಲ ದೇಶದ್ರೋಹಿಗಳು ಮದರಾಸು ಹೈಕೋರ್ಟಿನಲ್ಲಿ ದಾವೆ ಹೂಡಿರುವುದು ಖಂಡನೀಯ. ಇಂತಹ ದೇಶದ್ರೋಹಿಗಳನ್ನು ಖಂಡಿತಾ ನಮ್ಮ ದೇಶದಿಂದ ಹೊರಗಟ್ಟಬೇಕು. ಈ ದೇಶದ್ರೋಹಿಗಳ ಹಿನ್ನೆಲೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಅವರಿಗೂ ಪಾಕಿಸ್ತಾನೀ ಭಯೋತ್ಪಾದಕರಿಗೂ ಸಂಬಂಧ ಇರುವ ಬಗ್ಗೆ ತನಿಖೆ ಮಾಡಬೇಕು.

ಇದೆಲ್ಲ ಇರಲಿ .....ಈ ಬಾರಿಯ ಕನ್ನಡ ರಾಜ್ಯೊತ್ಸವಕ್ಕೆ ಹೊಸ ಕಳೆ ಬಂದಿದೆ. ಅದನ್ನು ಹೆಮ್ಮೆಯಿಂದ ಆಚರಿಸೋಣ

Sunday, September 07, 2008

ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು

ಬೆಂಗಳೂರು ಸೆಪ್ಟೆಂಬರ್ ೦೭:
ಒಂದು ದಿನ ಭಾನುವಾರ ಹೀಗೆ...ಒಂದು ಸಣ್ಣ ಯಾತ್ರೆ ಹೊರಟಿದ್ದೆವು. ಆಗ ನನ್ನ ಮೊಬೈಲ್ ಕ್ಯಾಮೆರಾದ ಕಣ್ಣಿಗೆ ಬಿದ್ದದ್ದು ಬೆಂಗಳೂರಿನ ಕೆಂಪಾಂಬುಧಿ ಕೆರೆಯ ಸನಿಹವಿರುವ ಈ ಡಾ.ರಾಜ್‌ಕುಮಾರ್ ಉದ್ಯ್ನಾನವನ. ಇಲ್ಲಿ ನೀವು ಬಂದು ಸ್ವಲ್ಪ ಹೊತ್ತು ವಿರಮಿಸಿದರೆ ಒಂದು ಥರಾ ಮಜಾ ಎನಿಸುತ್ತದೆ. ಆದರೆ ಇದು ಇನ್ನೂ ಪ್ರಾರಂಭವಾಗಿ ವರ್ಷವೂ ಕಳೆದಿಲ್ಲ. ಇಲ್ಲಿ ನಿಮಗೆ ಡೈನೋಸಾರ್ ಪ್ರತಿರೂಪ, ಮಮ್ಮಿಯ ಪ್ರತಿರೂಪ ಆಕರ್ಷಿಸುವ ಅಂಶಗಳು. ಅಲ್ಲದೆ ಇಲ್ಲಿ ಟ್ರೈನ್ ಕೂಡಾ ಇದೆ. ಅಲ್ಲದೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳು ಕವಿಗಳ ಪ್ರತಿಮೆಗಳು ಅವರ ವಿಅವರಗಳ ಸಹಿತ ನಿಮ್ಮ ಗಮನ ಸೆಳೆಯುತ್ತದೆ. ಅಲ್ಲದೆ ಸನಿಹದಲ್ಲಿಯೇ ಚಾಮರಾಜಪೇಟೆಯ ರುದ್ರಭೂಮಿ ಕೂಡಾ ಇರುವುದು ರಾತ್ರಿ ವೇಳೆಯಲ್ಲಿ ಕೆಲವರಿಗೆ ಇಲ್ಲಿ ಬರಲು ಭಯ ತರಿಸಬಹುದು. ಇದು ಶ್ರೀನಗರ ಹಾಗೂ ಹನುಮಂತನಗರದ ಮಧ್ಯಭಾಗದಲ್ಲಿ ಇದೆ. ಒಂದು ಸಲ ಭೇಟಿ ನೀಡಿ ಮಜಾ ಅನುಭವಿಸಿ.








Sunday, August 24, 2008

ನಮ್ಮ ಕಿಚ್ಚ ಸುದೀಪ್ ಹಿಂದಿ ಚಿತ್ರದಲ್ಲಿ




ಬೆಂಗಳೂರು ಆಗಸ್ಟ್ ೨೪: ಎಲ್ಲರೂ "ಫೂಂಕ್" ಎಂಬ ಹಿಂದಿ ಚಿತ್ರದ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದು, ಈಗ ಅದರ ಬಿಡುಗಡೆಯಾಗಿ ಎಲ್ಲರ ಮನಗೆದ್ದಿರುವುದು ನಮಗೆಲ್ಲ ಖುಷಿ ಕೊಡುವ ಸಂಗತಿ. ಅರೆ! ಹಿಂದಿ ಚಿತ್ರ ಬಿಡುಗಡೆಯಾದರೆ ಕನ್ನಡಿಗರೇಕೆ ಸಂಭ್ರಮಿಸಬೇಕು?..ಅದಕ್ಕೂ ಕಾರಣ ಇದೆ, ಈ ಚಿತ್ರದ ನಾಯಕ ನಮ್ಮೆಲ್ಲರ ಮೆಚ್ಚಿನ ಕನ್ನಡಿಗ "ಕಿಚ್ಚ" ಸುದೀಪ್. ಸುದೀಪ್ ಈಗ ತನ್ನ ಛಾಪನ್ನು ಹಿಂದಿ ಚಿತ್ರದಲ್ಲಿ ಮೂಡಿಸಿರುವುದು ಎಲ್ಲ ಕನ್ನಡಿಗರಿಗೂ ಖುಷಿ ಪಡುವ ವಿಚಾರ.

ಆದರೆ ಅದರಲ್ಲೂ ಈ ಚಿತ್ರದ ಪ್ರಚಾರಕ್ಕಾಗಿ ವಿಚಿತ್ರ ತರಹದ ಒಂದು ಬಾಜಿ ಶುರುವಾಗಿರುವುದು ಸ್ವಲ್ಪ ಅತಿರೇಕವೆನ್ನಿಸುತ್ತದೆ. ಈ ಚಿತ್ರವನ್ನು ಒಂಟಿಯಾಗಿ ಚಿತ್ರಮಂದಿರದಲ್ಲಿ ನೋಡಿದರೆ ೫ ಲಕ್ಷ ರೂಪಾಯಿಗಳ ಬಹುಮಾನವನ್ನು ಕೊಡುವುದಾಗಿ ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ಘೋಷಿಸಿರುವುದು ಕೆಲ ಪಡ್ಡೆ ಹುಡುಗರಿಗೆ ಒಂದು ಸವಾಲಾಗಿದೆ. ಆದರೆ ಅದನ್ನೂ ಸ್ವಲ್ಪ ದುಬಾರಿ ಹಣ ತುಂಬಿ, ಅಂದರೆ ೫೫ ಸಾವಿರ ರೂಪಾಯಿ ತುಂಬಿ ಈ ಚಿತ್ರವನ್ನು ಒಂಟಿಯಾಗಿ ವೀಕ್ಷಿಸಿ(ಹೊರ ಬಂದರೆ)ದರೆ ೫ ಲಕ್ಷ ಬಹುಮಾನ...!!!. ಇದಕ್ಕೆ ಸಡ್ಡು ಹೊಡೆದವರಂತೆ ಬೆಂಗಳೂರಿನ ಒಬ್ಬ ಧೈರ್ಯವಂತ, ಪ್ರವೀಣ್ ಎಂಬ ಯುವಕ ಆಗಲೇ ೫೫ಸಾವಿರ ರೂಪಾಯಿಗಳನ್ನು ಪಾವತಿಸಿ ಏಕಾಂಗಿಯಾಗಿ ಈ ಚಿತ್ರವನ್ನು ನಗರದ ಐನಾಕ್ಸ್ ಚಿತ್ರಮಂದಿರದಲ್ಲಿ ಇವತ್ತು ವೀಕ್ಷಿಸಿದ್ದಾನೆ. ಆದರೆ ಅದರ ಫಲಿತಾಂಶ ಗೊತ್ತಾಗಿಲ್ಲ.

ದೆವ್ವದ ಕತೆ ಹೊಂದಿರುವ ಈ ಚಿತ್ರ ತುಂಬಾ ಭಯಾನಕವಾಗಿದೆ ಎಂದು ಸ್ವತಃ ಸುದೀಪ್‌ರವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಮಕ್ಕಳನ್ನು ಈ ಚಿತ್ರ ನೋಡಲು ಕರೆದುಕೊಂಡು ಹೋಗುವುದು ಕಷ್ಟ. ಏನೇ ಆಗಲಿ ನಮ್ಮ ಸುದೀಪ್ ಈ ಬಾರಿ ಹಿಂದಿ ಚಿತ್ರರಂಗದಲ್ಲಿ ಒಂದು ಪ್ರಯತ್ನ ನಡೆಸಿದ್ದಾರೆ. ಅದು ಯಶಸ್ವಿಯಾಗಲಿ ಎಂದು ಎಲ್ಲರೂ ಹಾರೈಸೋಣ.

Monday, August 18, 2008

ಜಂಟಿ ಬಸ್‌ಗಳ ಕಿರಿಕಿರಿ





ಬೆಂಗಳೂರು ಆಗಸ್ಟ್ ೧೮: ಬೆಂಗಳೂರಿನಲ್ಲಿ ಈಗ ಯಮದೂತ ಬಿ.ಟಿ.ಎಸ್. ಬಸ್ಸುಗಳ ಜೊತೆಗೆ ಜಂಟಿ ವಾಹನಗಳು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಮೊದಲೇ ಆಟೋರಿಕ್ಷಾಗಳದಿಂದ ಬೇಸತ್ತಿರುವ ಜನಸಾಮಾನ್ಯ ಈಗ ಈ ಜಂಟಿವಾಹನಗಳ ಕಾಟದಿಂದ ಪರದಾಡಬೇಕಾಗಿದೆ. ಅಷ್ಟಕ್ಕೂ ಈ ಜಂತಿವಾಹನಗಳಿಂದಾಗುವ ಉಪಯೋಗವಾದರೂ ಏನು?. ಈ ಜಂಟಿವಾಹನಗಳು ಯಾವುದೇ
ತೊಂದರೆಯಿಲ್ಲದೆ, ಜನಗಳಿಗೆ, ಟ್ರಾಫಿಕ್‌ಗೆ ತೊಂದರೆ ಮಾಡದೆ ಚಲಿಸಬಹುದಾದ ಉತ್ತಮ ರಸ್ತೆಗಳಿವೆಯೇ?.

ಖಂಡಿತಾ ಇಲ್ಲ. ಬೆಂಗಳೂರಿನ ಭಾಗಶಃ ರಸ್ತೆಗಳು ತುಂಬಾ ಕಿರಿದಾಗಿರುವುದರಿಂದ ಈ ಜಂಟಿ ಬಸ್‌ಗಳು ತಿರುವು ತೆಗೆದುಕೊಳ್ಳಲು ತುಂಬಾ ತ್ರಾಸಪಡಬೇಕಾಗುತ್ತದೆ. ಆದರೆ ಈ ಜಂಟಿ ಬಸ್‌ನಲ್ಲಿ ಪ್ರಯಾಣಿಕರೇನೂ ತುಂಬಿ-ತುಳುಕುವಂತಹ ಪರಿಸ್ಥಿತಿಯಂತೂ ಅಪರೂಪ. ಮೊದಲೇ ಆಟೋಗಳಿಂದ ಟ್ರಾಫಿಕ್ ಕಿರಿಕಿರಿ ಆಗುತ್ತಿರುವುದಲ್ಲದೆ ಈಗ ಈ ಜಂಟಿ ಬಸ್‌ಗಳು ಬೇರೆ ತೊಂದರೆಯಾಗಿದೆ. ಏಕೆಂದರೆ ಈ ಬಸ್‍ಗಳಿಗೆ ತಿರುವು ತೆಗೆದುಕೊಳ್ಳಲು ಜಾಸ್ತಿ ಜಾಗ ಬೇಕಾಗುವುದರಿಂದ ತಿರುವುಗಳಲ್ಲಿ ವಾಹನ ಓಡಿಸುವವರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಸವಾರಿ ಮಾಡುವಂತಹ ಪರಿಸ್ಥಿತಿ. ಒಂಟಿ ಬಸ್‌ಗಳೇ ಖಾಲಿ ಹೋಗುತ್ತಿರುವ ಸಮಯದಲ್ಲಿ ಈ ಜಂಟಿ ಬಸ್‍ಗಳು ಬೇರೆ ಕೇಡು.

ಆದ್ದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು, ಈ ಜಂಟಿ ಬಸ್‌ಗಳನ್ನು ರಸ್ತೆಗಳು ಅಗಲವಾಗಿರುವ ಹಾಗೂ ಅಗತ್ಯವಿರುವ ಕಡೆ ಮಾತ್ರ ಹಾಕಿ, ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿಸಬೇಕಾಗಿದೆ.

Sunday, July 20, 2008

ಲಾಲ್‌ಬಾಗ್‌ಗೊಂದು ರಜಾದಿನದ ಭೇಟಿ
















ಲಾಲ್‌ಬಾಗ್‌ನ ಸೌಂದರ್ಯ ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಾಗ...................